ಕರಾವಳಿಯಲ್ಲಿ ಅಡಿಕೆ ರೋಗ ತಡೆಗೆ ಕೇಂದ್ರದಿಂದ ಬೆಂಬಲ: ಕ್ಯಾ. ಚೌಟಗೆ ಸಚಿವ ಶಿವರಾಜ್ ಚೌಹಾಣ್ ಅಭಯ

ಪುತ್ತೂರು: ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಅಡಿಕೆ ಬೆಳೆಗೆ ಮಾರಕವಾಗಿರುವ ಎಲೆಚುಕ್ಕಿ ರೋಗ ಸೇರಿದಂತೆ ವಿವಿಧ ರೋಗಗಳ ನಿಯಂತ್ರಣಕ್ಕಾಗಿ ವೈಜ್ಞಾನಿಕ ಸಂಶೋಧನೆ, ಕ್ಷೇತ್ರ ಸಮೀಕ್ಷೆ ಹಾಗೂ ಸಮಗ್ರ ರೋಗ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಕ್ಯಾ. ಚೌಟ ಅವರು ಪ್ರಸ್ತಾಪಿಸಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಕಾಸರಗೋಡಿನ ಕೇಂದ್ರ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ICAR-CPCRI) ಅಡಿಕೆಯನ್ನು ಬಾಧಿಸುವ ಕೊಳೆ ರೋಗ, ಎಲೆಚುಕ್ಕಿ ರೋಗ ಮುಂತಾದವುಗಳ ಬಗ್ಗೆ ನಿರಂತರ ವೈಜ್ಞಾನಿಕ ಸಂಶೋಧನೆ ನಡೆಸುತ್ತಿದ್ದು, ರೋಗ ನಿರ್ವಹಣೆಗೆ ಅಗತ್ಯ ಶಿಫಾರಸುಗಳನ್ನು ಮಾಡುತ್ತಿದೆ. ಬೆಳ್ತಂಗಡಿ ಹಾಗೂ ಸುಳ್ಯ ಸೇರಿದಂತೆ 7 ಕ್ಲಸ್ಟರ್‌ಗಳಲ್ಲಿ ಸಮಗ್ರ ರೋಗ ನಿರ್ವಹಣಾ ಪದ್ಧತಿಗಳ ಕ್ಷೇತ್ರ ಪ್ರತ್ಯಕ್ಷಿಕೆ ನಡೆಸಲಾಗಿದೆ. ಈ ಪದ್ಧತಿಗಳನ್ನು ಅಳವಡಿಸಿಕೊಂಡ ರೋಗಬಾಧಿತ ಅಡಿಕೆ ತೋಟಗಳಲ್ಲಿ ರೋಗದ ತೀವ್ರತೆ ಗಮನಾರ್ಹವಾಗಿ ಕಡಿಮೆಯಿರುವುದು ಕಂಡುಬಂದಿದೆ. ರೋಗಬಾಧಿತ ತೋಟಗಳಲ್ಲಿ ರೋಗದ ಆರಂಭಿಕ ಹಾಗೂ ತೀವ್ರ ಹಂತಗಳಲ್ಲಿ ಶಿಫಾರಸು ಮಾಡಿದ ಔಷಧಿಗಳು ಮತ್ತು ಸಮಗ್ರ ಪೋಷಕಾಂಶಗಳ ಸೂಕ್ತ ಬಳಕೆಯಿಂದ ರೋಗ ನಿಯಂತ್ರಣಕ್ಕೆ ಬಂದಿದ್ದು, ಇಳುವರಿಯಲ್ಲೂ ಸುಧಾರಣೆ ಕಂಡುಬಂದಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಸೇರಿದಂತೆ ಎಲೆಚುಕ್ಕಿ ರೋಗ ತೀವ್ರವಾಗಿರುವ ಪ್ರದೇಶಗಳಲ್ಲಿ ರೋಗದ ಸ್ಥಿತಿಗತಿಯನ್ನು ಕೃಷಿ ಸಚಿವಾಲಯವು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

2022ರ ನವೆಂಬರ್‌ನಲ್ಲಿ ರಚನೆಯಾದ ರಾಷ್ಟ್ರೀಯ ಅಡಿಕೆ ವೈಜ್ಞಾನಿಕ ಸಮಿತಿಯು ರೋಗಬಾಧಿತ ಕ್ಷೇತ್ರಗಳಿಗೆ ಭೇಟಿ ನೀಡಿ, ರೈತರೊಂದಿಗೆ ಸಮಾಲೋಚಿಸಿ ವೈಜ್ಞಾನಿಕ ಆಧಾರದ ಮೇಲೆ ಸಮಗ್ರ ರೋಗ ನಿರ್ವಹಣಾ ಮಾರ್ಗಸೂಚಿಗಳನ್ನು ಶಿಫಾರಸು ಮಾಡಿದೆ. MIDH ಯೋಜನೆಯಡಿ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ ಯೋಜನೆಯಡಿ, ಸಿರಸಿ, ಶೃಂಗೇರಿ, ಬೆಳ್ತಂಗಡಿ ಮತ್ತು ಸುಳ್ಯ ಭಾಗಗಳಲ್ಲಿ ರೈತರಿಗೆ ಸೂಕ್ತ ತರಬೇತಿ, ರೋಗ ನಿರ್ವಹಣಾ ಸಾಮಗ್ರಿಗಳು ಮತ್ತು ತಾಂತ್ರಿಕ ನೆರವು ನೀಡಲಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಹಿತರಕ್ಷಣೆ, ಕೃಷಿಯ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ICAR-CPCRI ಸಂಸ್ಥೆಯು ತನ್ನ ಸಂಶೋಧನೆಯನ್ನು ಮುಂದುವರಿಸಲಿದ್ದು, ಮುಂಬರುವ ದಿನಗಳಲ್ಲೂ ಅಗತ್ಯ ತಾಂತ್ರಿಕ ಸಹಾಯ ಮತ್ತು ಸಹಕಾರವನ್ನು ನೀಡಲಿದೆ ಎಂದು ಕೇಂದ್ರ ಸಚಿವರು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರಿಗೆ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here