ದ.ಕ. ಜಿಲ್ಲೆಯಲ್ಲಿ 1.50 ಲಕ್ಷ ಮತದಾರರಿಗೆ ಬರಲಿದೆ ನೋಟಿಸ್: ಭೌತಿಕ ಹಾಜರಾತಿ ಕಡ್ಡಾಯ, ತಪ್ಪಿದರೆ ಪಟ್ಟಿಯಿಂದ ಹೆಸರು ಔಟ್!

ವಿಶೇಷ ಸಮಗ್ರ ಪರಿಷ್ಕರಣೆ-2026 ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

– ‘ನೋ ಮ್ಯಾಪಿಂಗ್’ ಮತ್ತು ತಾರ್ಕಿಕ ಲೋಪದೋಷಗಳ ತಿದ್ದುಪಡಿಗೆ ಒಟ್ಟು 1.50 ಲಕ್ಷ ಮತದಾರರಿಗೆ ಶೀಘ್ರ ನೋಟಿಸ್, 2ನೇ ಬಾರಿಯೂ ಖುದ್ದು ಹಾಜರಾಗದಿದ್ದರೆ ಮತದಾರರೇ ಅಲ್ಲ!

– ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 16.46 ಲಕ್ಷ ಮತದಾರರು: ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 16,46,387 ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ ವಿವಿಧ ಪರಿಶೀಲನೆ ಕೋರಿ 1,50,153 ಮತದಾರರಿಗೆ ನೋಟಿಸ್‌ ನೀಡಲಾಗುತ್ತದೆ. ನೋಟಿಸ್ ಸ್ವೀಕರಿಸುವ ಮತದಾರರು ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಇಆರ್‌ಒ/ ಎಇಆರ್‌ಒ ಎದುರು ಭೌತಿಕವಾಗಿ ಹಾಜರಾಗಲೇಬೇಕು, ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಅವರ ಹೆಸರು ಅಳಿಯಬಹುದು ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟಿಸ್‌ಗಳನ್ನು ಇನ್ನೆರಡು ದಿನಗಳಲ್ಲಿ ಬಿ.ಎಲ್.ಒ.ಗಳ ಮೂಲಕ ಮತದಾರರ ನಿವಾಸಕ್ಕೆ ತಲುಪಿಸಲಾಗುವುದು. ಎಸ್‌ಐಆರ್‌ನ ಮೊದಲ ಹಂತದಲ್ಲಿ ಸರಿಯಾಗಿ ಮ್ಯಾಪ್ ಮಾಡಲಾಗದವರು ಅಥವಾ ನೀಡಿದ ವಿವರಗಳು ತಾರ್ಕಿಕ ವ್ಯತ್ಯಾಸಗಳನ್ನು ತೋರಿಸಿದರೆ ನೋಟಿಸ್‌ಗಳನ್ನು ನೀಡಲಾಗುತ್ತದೆ ಎಂದರು.

ನೋಟಿಸ್ ಪಡೆದು ಅಗತ್ಯ ದಾಖಲೆಗಳೊಂದಿಗೆ ಖುದ್ದು ಹಾಜರಾಗುವುದು ಕಡ್ಡಾಯ. ಪ್ರಥಮ ಬಾರಿಗೆ ನಿಗದಿತ ದಿನಾಂಕದಂದು ಹಾಜರಾಗಲು ಸಾಧ್ಯವಾಗದೆ ಇದ್ದರೆ ಒಮ್ಮೆ ಮಾತ್ರ ವಿಸ್ತರಣೆಗೆ ಅವಕಾಶ ನೀಡಲಾಗುವುದು. 2ನೇ ಬಾರಿಯೂ ಹಾಜರಾಗಲು ವಿಫಲವಾದರೆ ಮತದಾರರ ಪಟ್ಟಿಯಿಂದ ಅವರ ಹೆಸರು ಅಳಿಸಿಹೋಗುವ ಸಾಧ್ಯತೆ ಇದೆ. ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಎಲ್ಲೆಲ್ಲಿ ಎಷ್ಟೆಷ್ಟು?:

ನೋಟಿಸ್ ನೀಡಲು ಗುರುತಿಸಲಾದ 1,50,153 ಪ್ರಕರಣಗಳು ಹೆಸರಿನಲ್ಲಿ ಬದಲಾವಣೆ, ಪೋಷಕರ ಹೆಸರಿನಲ್ಲಿ ಬದಲಾವಣೆ ಸೇರಿದಂತೆ ತಾರ್ಕಿಕ ವ್ಯತ್ಯಾಸಗಳಿಗೆ ಸಂಬಂಧಿಸಿವೆ. ಮಂಗಳೂರು ನಗರ ದಕ್ಷಿಣದಲ್ಲಿ ಅತಿ ಹೆಚ್ಚು 35,188 ಇಂತಹ ಪ್ರಕರಣಗಳಿದ್ದರೆ, ಮಂಗಳೂರು ನಗರ ಉತ್ತರದಲ್ಲಿ 27,915 ಮತ್ತು ಮೂಡುಬಿದಿರೆಯಲ್ಲಿ 21,843, ಬೆಳ್ತಂಗಡಿ 12457, ಮಂಗಳೂರಿನಲ್ಲಿ 18349, ಬಂಟ್ವಾಳದಲ್ಲಿ 9049, ಪುತ್ತೂರಿನಲ್ಲಿ 12,333 ಮತ್ತು ಸುಳ್ಯದಲ್ಲಿ 13019 ಪ್ರಕರಣಗಳಿದ್ದು, ಅವರೆಲ್ಲರಿಗೂ ನೋಟಿಸ್‌ ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೇವಲ 8 ಇಆರ್‌ಒಗಳು ಇರುವುದರಿಂದ ಜಿಲ್ಲಾಡಳಿತವು ಹೆಚ್ಚುವರಿಯಾಗಿ 154 ಗ್ರೂಪ್ ಬಿ ಅಧಿಕಾರಿಗಳನ್ನು ಎಇಆರ್‌ಒಗಳಾಗಿ ನಿಯೋಜಿಸಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದನ್ನು ಒಂದೆರಡು ದಿನಗಳಲ್ಲಿ ಅನುಮೋದಿಸುವ ಸಾಧ್ಯತೆಯಿದೆ. ನೋಟಿಸ್ ಪಡೆದವರ ದಾಖಲೆಗಳ ಪರಿಶೀಲನೆಗಾಗಿ ಇಆರ್‌ಒ/ ಎಇಆರ್‌ಒಗಳು (ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ) ಮತದಾರರ ಸೌಲಭ್ಯ ಕೇಂದ್ರಗಳಲ್ಲಿ ಹಾಜರಿರುತ್ತಾರೆ ಎಂದರು.

16,46,387 ಮತದಾರರು:

ಕರಡು ಮತದಾರರ ಪಟ್ಟಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16,46,387 ಮತದಾರರಿದ್ದು, ಇದರಲ್ಲಿ 8,07,600 ಪುರುಷರು, 8,38,768 ಮಹಿಳೆಯರು ಮತ್ತು 19 ತೃತೀಯ ಲಿಂಗದ ಮತದಾರರು ಸೇರಿದ್ದಾರೆ. ಜೂನ್ 16ರ ವೇಳೆಗೆ ಜಿಲ್ಲೆಯಲ್ಲಿ 18,03,766 ಮತದಾರರಿದ್ದರು. ವ್ಯತ್ಯಾಸ ಬಂದ 1,57,379 ಮತದಾರರನ್ನು ಎ.ಎಸ್.ಡಿ.ಡಿ. – ಗೈರುಹಾಜರಿ, ಶಾಶ್ವತ ಸ್ಥಳಾಂತರ, ಸಾವು ಮತ್ತು ನಕಲು ಮತ್ತು ಇತರ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಇದರಲ್ಲಿ 82,988 ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರಿದ್ದರೆ, 45,318 ಮೃತ ಮತದಾರರು, 15,395 ಈಗಾಗಲೇ ದಾಖಲಾದ/ ನಕಲು ಪ್ರಕರಣಗಳು ಮತ್ತು 11,124 ಗೈರುಹಾಜರಿ ಮತದಾರರು ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಆಕ್ಷೇಪಣೆಗೆ ಅವಕಾಶ:

ಎ.ಎಸ್.ಡಿ.ಡಿ. ಎಂದು ವರ್ಗೀಕರಿಸಲಾದ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದ್ದು, ಅವರು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಕಾಲಾವಕಾಶವಿದೆ. ನೋಟಿಸ್ ವಿಲೇವಾರಿ ಪ್ರಕ್ರಿಯೆಯು ಅಕ್ಟೋಬರ್ 22ರವರೆಗೆ ಮುಂದುವರಿಯಲಿದ್ದು, ಅ.27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

ಹೆಚ್ಚುವರಿ ಮತಗಟ್ಟೆಗಳು:

ಜಿಲ್ಲೆಯಲ್ಲಿ ಇದ್ದ ಒಟ್ಟು 1,876 ಮತಗಟ್ಟೆಗಳನ್ನು ಈಗ 2,019ಕ್ಕೆ ಹೆಚ್ಚಿಸಲಾಗಿದೆ. ಬೆಳ್ತಂಗಡಿಯಲ್ಲಿ 27, ಮೂಡುಬಿದಿರೆಯಲ್ಲಿ 26, ಮಂಗಳೂರು ಉತ್ತರದಲ್ಲಿ 13, ಮಂಗಳೂರು ದಕ್ಷಿಣದಲ್ಲಿ 11, ಮಂಗಳೂರಿನಲ್ಲಿ 25, ಬಂಟ್ವಾಳದಲ್ಲಿ 12, ಪುತ್ತೂರಿನಲ್ಲಿ 24 ಮತ್ತು ಸುಳ್ಯದಲ್ಲಿ 5 ಹೊಸ ಮತಗಟ್ಟೆಗಳನ್ನು ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಅಪರ ಜಿಲ್ಲಾಧಿಕಾರಿ ರಾಜು ಕೆ. ಇದ್ದರು.

ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆ- 16,46,387

ಪುರುಷ ಮತದಾರರು- 807600

ಮಹಿಳಾ ಮತದಾರರು- 838768

ತೃತೀಯ ಲಿಂಗ ಮತದಾರರು- 19

ಎ.ಎಸ್.ಡಿ.ಡಿ. ಎಂದು ಗುರುತಿಸಲಾದ ಮತದಾರರು- 1,57,379

ನೋಟಿಸ್‌ ಪಡೆಯುವ ಮತದಾರರ ಸಂಖ್ಯೆ- 1,50,153

ನೋಟಿಸ್ ಬಂದ ಮತದಾರರು ಏನು ಮಾಡಬೇಕು?

ವಿಚಾರಣೆಯ ದಿನಾಂಕ, ಸಮಯ, ಸ್ಥಳ ಹಾಗೂ ಹಾಜರುಪಡಿಸಬೇಕಾದ ದಾಖಲೆಗಳ ವಿವರ ನೋಟಿಸ್‌ನಲ್ಲಿ ಇರುತ್ತದೆ. ಆನ್‌ಲೈನ್ ಮೂಲಕ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಅವಕಾಶವಿದ್ದರೂ, ಮತದಾರರು ಸ್ವತಃ ಇ.ಆರ್.ಒ/ ಎ.ಇ.ಆರ್.ಒ ಎದುರು ಭೌತಿಕವಾಗಿ ಹಾಜರಾಗಲೇಬೇಕು.

ಹಾಜರುಪಡಿಸಬೇಕಾದ ದಾಖಲೆಗಳು:

01.07.1987ಕ್ಕಿಂತ ಮೊದಲು ಜನಿಸಿದವರು ಸ್ವಂತ ಜನ್ಮ ದಿನಾಂಕ/ ಜನ್ಮ ಸ್ಥಳ ದೃಢೀಕರಿಸುವ ಯಾವುದಾದರೂ ಒಂದು ದಾಖಲೆ. 01.07.1987ರಿಂದ 02.12.2004ರವರೆಗೆ ಜನಿಸಿದವರು ಸ್ವಂತ ಜನ್ಮ ದಿನಾಂಕ/ ಜನ್ಮ ಸ್ಥಳ ದೃಢೀಕರಿಸುವ ದಾಖಲೆಯ ಜತೆಗೆ ತಂದೆ ಅಥವಾ ತಾಯಿಯ ಜನ್ಮ ದಿನಾಂಕ/ ಜನ್ಮಸ್ಥಳ ದೃಢೀಕರಿಸುವ ದಾಖಲೆ. 02.12.2004ರ ನಂತರ ಜನಿಸಿದವರು ಸ್ವಂತ ದಾಖಲೆ ಹಾಗೂ ತಂದೆ ಮತ್ತು ತಾಯಿ ಇಬ್ಬರ ಜನ್ಮ ದಿನಾಂಕ/ ಜನ್ಮ ಸ್ಥಳ ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕು.

LEAVE A REPLY

Please enter your comment!
Please enter your name here