ಕ್ಯಾಂಪ್ಕೊ ದಾಖಲೆ ಸಾಧನೆ: ₹ 3,735 ಕೋಟಿ ವಹಿವಾಟು, ₹ 49.62 ಕೋಟಿ ಲಾಭ- ಶೇ. 14 ಡಿವಿಡೆಂಡ್ ಶಿಫಾರಸು: ಎಸ್.ಆರ್. ಸತೀಶ್ಚಂದ್ರ- ರೈತಪರ ಯೋಜನೆಗಳು, ಡಿಜಿಟಲ್ ಪರಿವರ್ತನೆ ಮತ್ತು ವ್ಯವಹಾರ ವಿಸ್ತರಣೆ- ಕ್ಯಾಂಪ್ಕೊ ಸಾಧನೆಗೆ ಹೊಸ ಬಲ

ಮಂಗಳೂರು: ಅಡಕೆ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಕೊಕ್ಕೊ ವಲಯದಲ್ಲಿನ ಸವಾಲಿನ ಪರಿಸ್ಥಿತಿಗಳ ನಡುವೆಯೂ, ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆ- ದ ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೊ ಮಾರ್ಕೆಟಿಂಗ್ ಅಂಡ್ ಪ್ರೊಸೆಸ್ಸಿಂಗ್ ಕೊ ಆಪರೇಟಿವ್ ಲಿಮಿಟೆಡ್ (ದ ಕ್ಯಾಂಪ್ಕೊ ಲಿ.) 2025-26ನೇ ಸಾಲಿನಲ್ಲಿ ₹ 3,735 ಕೋಟಿ ಒಟ್ಟು ವ್ಯವಹಾರ ದಾಖಲಿಸಿದ್ದು, ₹ 49.62 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿ ದಾಖಲೆ ಸಾಧನೆ ಮಾಡಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಸಂಸ್ಥೆಯ ನಿರಂತರ ಆರ್ಥಿಕ ಶಕ್ತಿ ಹಾಗೂ ಬೆಳೆಗಾರ ಸದಸ್ಯರ ಬಗೆಗಿನ ಬದ್ಧತೆಯ ಪ್ರತೀಕವಾಗಿ 2025-26ನೇ ಸಾಲಿಗೆ ಸದಸ್ಯರಿಗೆ ಶೇ. 14ರಷ್ಟು ಡಿವಿಡೆಂಡ್ ನೀಡಲು ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ ಎಂದು ತಿಳಿಸಿದರು.ಅಡಕೆ- ಕ್ಯಾಂಪ್ಕೊ ವಹಿವಾಟಿನ ಬೆನ್ನೆಲುಬು: ಸಂಸ್ಥೆಯು ₹ 2,924.32 ಕೋಟಿ ಮೌಲ್ಯದ 58,742.76 ಮೆ.ಟನ್ ಅಡಕೆ ಖರೀದಿಸಿದ್ದು, ಇದರಲ್ಲಿ ₹ 1,362.13 ಕೋಟಿ ಮೌಲ್ಯದ 24,052.07 ಮೆ.ಟನ್ ಕೆಂಪಡಿಕೆ ಮತ್ತು ₹1,562.19 ಕೋಟಿ ಮೌಲ್ಯದ 34,690.69 ಮೆ.ಟನ್ ಬಿಳಿ ಅಡಕೆ ಖರೀದಿ ಸೇರಿದೆ. ಒಟ್ಟು ₹ 2,985.19 ಕೋಟಿ ಮೌಲ್ಯದ 59,088.64 ಮೆ.ಟನ್ ಅಡಕೆ ಮಾರಾಟ ಮಾಡಿದ್ದು, ಇದರಲ್ಲಿ 22,914.53 ಮೆ.ಟನ್ ಕೆಂಪಡಿಕೆ ಮತ್ತು 36,174.11 ಮೆ.ಟನ್ ಬಿಳಿ ಅಡಕೆಯ ಮಾರಾಟ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.ಅಡಕೆ ಆಮದು ಗಂಭೀರ ಸವಾಲು:ಅಡಕೆಯ ದೇಶೀಯ ಮಾರುಕಟ್ಟೆಗೆ ಹೆಚ್ಚುತ್ತಿರುವ ಆಮದು ಅಡಕೆಯ ಒಳಹರಿವು ಗಂಭೀರ ಸವಾಲು ನೀಡುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಎಸ್.ಆರ್. ಸತೀಶ್ಚಂದ್ರ, ಆಮದು ಅಡಕೆಯನ್ನು ದೇಶೀಯವಾಗಿ ಬೆಳೆದ ಅಡಕೆಯೊಂದಿಗೆ ಮಿಶ್ರಣ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ, ಅದರಲ್ಲೂ ಕ್ಯಾಂಪ್ಕೊ ಶಾಖೆಗಳಲ್ಲಿ ಮಾರಾಟಕ್ಕೆ ಸಂಚು ನಡೆಸುತ್ತಿರುವುದು ಅತ್ಯಂತ ಗಂಭೀರ ಸಮಸ್ಯೆ. ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ಈ ವಿಷಯ ತರಲಾಗಿದೆ. ಅಕ್ರಮ ಆಮದು, ತಪ್ಪು ವರ್ಗೀಕರಣ ಹಾಗೂ ಆಮದು ಅಡಕೆ ದೇಶೀಯ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದೇವೆ..

ದೇಶೀಯ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ ಪರಿಣಾಮಕಾರಿ ಮತ್ತು ಸಮನ್ವಯದ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಹೇಳಿದರು.ಉತ್ತರ ಪ್ರದೇಶದಲ್ಲಿ ಅಡಕೆ ವಹಿವಾಟಿನ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯು ಅಂತಾರಾಜ್ಯ ಮಾರಾಟದ ವೆಚ್ಚ ಹೆಚ್ಚಿಸುತ್ತಿದ್ದು, ಸಂಸ್ಥೆಯ ಕಾರ್ಯಾಚರಣೆಯ ಸ್ಪರ್ಧಾತ್ಮಕತೆ ಮೇಲೆ ಪರಿಣಾಮ ಬೀರುತ್ತಿದೆ. “ಒಂದು ರಾಷ್ಟ್ರ, ಒಂದು ತೆರಿಗೆ” ತತ್ವದ ಹಿನ್ನೆಲೆಯಲ್ಲಿ ಹೆಚ್ಚುವರಿ ತೆರಿಗೆ- ಸುಂಕದ ಹೊರೆ ಬೀಳಬಾರದೆಂಬ ದೃಷ್ಟಿಯಿಂದ ಈ ವಿಷಯವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉತ್ತರ ಪ್ರದೇಶ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ರಾಜ್ಯ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.ಕೊಕ್ಕೊ, ಚಾಕೊಲೇಟ್ ವಿಭಾಗದಲ್ಲಿ ಉತ್ತಮ ಸಾಧನೆ:ಆರ್ಥಿಕ ವರ್ಷದಲ್ಲಿ ಕ್ಯಾಂಪ್ಕೊ ₹ 27.96 ಕೋಟಿ ಮೌಲ್ಯದ 2,351.18 ಮೆ.ಟನ್ ಹಸಿ ಕೊಕ್ಕೊ ಬೀಜ ಮತ್ತು ₹ 185.52 ಕೋಟಿ ಮೌಲ್ಯದ 4,021.85 ಮೆ.ಟನ್ ಒಣ ಬೀಜ ಖರೀದಿಸಿದೆ. ಚಾಕೊಲೇಟ್ ಕಾರ್ಖಾನೆಯಲ್ಲಿ ಒಟ್ಟು 5,224.64 ಮೆ.ಟನ್ ಒಣ ಬೀಜ ಬಳಕೆಯಾಗಿದೆ. ಹಿಂದಿನ ವರ್ಷದಲ್ಲಿ ಕಂಡುಬಂದ ಬೆಲೆ ಏರಿಕೆಯಿಂದಾಗಿ ಕೊಕ್ಕೊ ಬೀಜದ ಖರೀದಿ ವೆಚ್ಚ ವಿಪರೀತ ಹೆಚ್ಚಾಗಿದ್ದರೂ, ಚಾಕೊಲೇಟ್ ವಿಭಾಗವು ಭೌತಿಕ ಬೆಳವಣಿಗೆ ಸಾಧಿಸಿ ಗಣನೀಯ ಮಾರಾಟ ದಾಖಲಿಸಿದೆ ಎಂದು ಸತೀಶ್ಚಂದ್ರ ವಿವರಿಸಿದರು.ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯು ಆರ್ಥಿಕ ವರ್ಷದಲ್ಲಿ 12,606.40 ಮೆ.ಟನ್ ಉತ್ಪಾದನೆ ಮಾಡಿದ್ದು, ಇದರಲ್ಲಿ ಕ್ಯಾಂಪ್ಕೊ ಸ್ವಂತ ಬ್ರಾಂಡ್‌ ಅಡಿಯಲ್ಲಿ 12,257.58 ಮೆ.ಟನ್ ಚಾಕೊಲೇಟ್ ಉತ್ಪನ್ನಗಳು, ಜಾಬ್-ವರ್ಕ್ ಅಡಿಯಲ್ಲಿ 258.40 ಮೆ.ಟನ್ ಹಾಗೂ 90.42 ಮೆ.ಟನ್ ತೆಂಗಿನ ಎಣ್ಣೆ ಸೇರಿದೆ. ಸಾಮರ್ಥ್ಯ ವಿಸ್ತರಣೆಯ ಭಾಗವಾಗಿ, ‘ಕೋಕೋ ಬಟರ್ ಪ್ರೆಸ್’ ಸೌಲಭ್ಯದಲ್ಲಿ 18 ಪಾತ್ರೆಗಳನ್ನು (ಪಾಟ್ಸ್) ಅಳವಡಿಸಲಾಗಿದ್ದು, ಇದರಿಂದ ಬೆಣ್ಣೆಯ ಅಗತ್ಯತೆಗಾಗಿ ಕೋಕೋ ಮಾಸ್ ಸಂಸ್ಕರಣಾ ಸಾಮರ್ಥ್ಯವು ದಿನಕ್ಕೆ ಹೆಚ್ಚುವರಿ 15 ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗಿದೆ ಎಂದರು.₹488.65 ಕೋಟಿ ಮೌಲ್ಯದ ಕೊಕ್ಕೊ ಮತ್ತು ಚಾಕೊಲೇಟ್ ಉತ್ಪನ್ನಗಳು ಮಾರಾಟವಾಗಿದ್ದು, ಇದರಲ್ಲಿ ಸಿದ್ಧ/ ಚಿಲ್ಲರೆ ಚಾಕೊಲೇಟ್ ವಿಭಾಗದಿಂದ ₹75.59 ಕೋಟಿ, ಕೈಗಾರಿಕಾ ಚಾಕೊಲೇಟ್ ವಿಭಾಗದಿಂದ ₹384.91 ಕೋಟಿ ಮತ್ತು ರಫ್ತಿನಿಂದ ₹24.82 ಕೋಟಿ ಸೇರಿದೆ. ತೆಂಗಿನ ಎಣ್ಣೆ ಮಾರಾಟದಿಂದ ₹3.33 ಕೋಟಿ ಹಾಗೂ ಜಾಬ್-ವರ್ಕ್ ಸಂಸ್ಕರಣಾ ಶುಲ್ಕದಿಂದ ₹1.25 ಕೋಟಿ ಆದಾಯ ಬಂದಿದೆ.ಪ್ರೀಮಿಯಂ ಚಾಕೊಲೇಟ್: ಕ್ಯಾಂಪ್ಕೊದ ಪ್ರೀಮಿಯಂ ಚಾಕೊಲೇಟ್ ಶ್ರೇಣಿ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಭ್ಯವಿದ್ದು, ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ಯಾಂಪ್ಕೊ ಬ್ರಾಂಡ್‌ ಪರಿಚಯವಾಗುತ್ತಿದೆ. ಚಾಕೊಲೇಟ್ ಉತ್ಪಾದನಾ ಮೂಲಸೌಕರ್ಯ ಬಲವರ್ಧನೆಗೂ ಸಂಸ್ಥೆ ಕ್ರಮ ಕೈಗೊಂಡಿದೆ. ಹೊಸ ರಿಫೈನರ್ ಅಳವಡಿಸಲಾಗಿದ್ದು, ಹೆಚ್ಚುವರಿ ಕೊಕ್ಕೊ ಬಟರ್ ಪ್ರೆಸ್ ಖರೀದಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.ರಬ್ಬರ್, ಕಾಳುಮೆಣಸು ವಿಭಾಗಗಳ ಕೊಡುಗೆ:ಕ್ಯಾಂಪ್ಕೊ ₹ 32.41 ಕೋಟಿ ಮೌಲ್ಯದ 1,704.77 ಮೆ.ಟನ್ ರಬ್ಬರ್ ಖರೀದಿಸಿ, ₹33.67 ಕೋಟಿ ಮೌಲ್ಯದ 1,728.38 ಮೆ.ಟನ್ ಮಾರಾಟ ಮಾಡಿದೆ. ಜತೆಗೆ ₹113.22 ಕೋಟಿ ಮೌಲ್ಯದ 1,656.12 ಮೆ.ಟನ್ ಕಾಳುಮೆಣಸು ಖರೀದಿಸಿ, ₹134.27 ಕೋಟಿ ಮೌಲ್ಯದ 1,982.01 ಮೆ.ಟನ್ ಮಾರಾಟ ಮಾಡುವ ಮೂಲಕ ತೋಟಗಾರಿಕಾ ಬೆಳೆ ವಲಯದಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿಕೊಂಡಿದೆ.ಕೃಷಿ ಉತ್ತೇಜಕ ಉತ್ಪನ್ನ ಬೆಂಬಲ:ವರ್ಷದ ಅವಧಿಯಲ್ಲಿ ಕ್ಯಾಂಪ್ಕೊ ಶಾಖೆಗಳು ಮತ್ತು ಏಜೆಂಟ್ ಸಂಘಗಳ ಮೂಲಕ ಕ್ಯಾಂಪ್ಕೊ ಬ್ರಾಂಡ್‌ನ 357.27 ಮೆ.ಟನ್ ಐಎಸ್‌ಐ ಗುಣಮಟ್ಟದ ಮೈಲುತುತ್ತನ್ನು ರೈತರಿಗೆ ಸಬ್ಸಿಡಿ ಸಹಿತ ವಿತರಿಸಲಾಗಿದೆ. ಕ್ಯಾಂಪ್ಕೊ ಆಯುಷ್-ಜೈವಿಕ ಸಮೃದ್ಧ ಸಾವಯವ ಗೊಬ್ಬರ ಮತ್ತು ಕ್ಯಾಂಪ್ಕೊ ಪೌಷ್ಟಿಕ- ಸೂಕ್ಷ್ಮ ಪೋಷಕಾಂಶ ಮಿಶ್ರಣ ಗೊಬ್ಬರ ಸೇರಿದಂತೆ ಕ್ಯಾಂಪ್ಕೊ ಬ್ರಾಂಡ್‌ನ ಗೊಬ್ಬರ ಉತ್ಪನ್ನಗಳ ಮಾರಾಟ 5,181.93 ಮೆ.ಟನ್ (₹7.32 ಕೋಟಿ ಮೌಲ್ಯ) ತಲುಪಿದೆ. ಇದಲ್ಲದೆ, ₹1.86 ಕೋಟಿ ಮೌಲ್ಯದ 1,420.45 ಮೆ.ಟನ್ ಕ್ಯಾಂಪ್ಕೊ ಡಾಲಮೈಟ್ ಮತ್ತು ₹0.15 ಕೋಟಿ ಮೌಲ್ಯದ 5.51 ಮೆ.ಟನ್ ಕ್ಯಾಂಪ್ಕೊ ಮ್ಯಾಕ್ಸ್‌ವೆಟ್ ಮಾರಾಟವಾಗಿದೆ ಎಂದು ಸತೀಶ್ಚಂದ್ರ ಮಾಹಿತಿ ನೀಡಿದರು.1.16 ಲಕ್ಷ ಕೊಕ್ಕೊ ಸಸಿಗಳ ವಿತರಣೆ:ಕೊಕ್ಕೊ ಕೃಷಿಯನ್ನು ಬಲಪಡಿಸಿ ಗುಣಮಟ್ಟದ ಕೊಕ್ಕೊ ಗಿಡಗಳ ಪೂರೈಸುವ ಪ್ರಯತ್ನದ ಭಾಗವಾಗಿ, 2025-26ರಲ್ಲಿ ಕ್ಯಾಂಪ್ಕೊ 1,16,275 ಕೊಕ್ಕೊ ಸಸಿಗಳನ್ನು ಬೆಳೆಗಾರ-ಸದಸ್ಯರಿಗೆ ರಿಯಾಯಿತಿ ದರದಲ್ಲಿ ವಿತರಿಸಿದೆ. 2026-27ನೇ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೊಕ್ಕೊ ಸಸಿಗಳನ್ನು ಬೆಳೆಗಾರ-ಸದಸ್ಯರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಸಂಸ್ಥೆ ಯೋಜಿಸಿದೆ ಎಂದರು.ಸದಸ್ಯರಿಗೆ ₹ 86.42 ಲಕ್ಷ ನೆರವುಬೆಳೆಗಾರ ಸದಸ್ಯರ ಕಲ್ಯಾಣಾಭಿವೃದ್ಧಿಯನ್ನು ಕ್ಯಾಂಪ್ಕೊ ಪ್ರಮುಖ ಆದ್ಯತೆಯಾಗಿ ಪರಿಗಣಿಸಿದ್ದು, 2025-26ರ ಅವಧಿಯಲ್ಲಿ ವಿವಿಧ ಸದಸ್ಯ ಸೌಲಭ್ಯ ಯೋಜನೆಗಳಡಿ ಒಟ್ಟು 120 ಫಲಾನುಭವಿಗಳಿಗೆ ₹86.42 ಲಕ್ಷ ಆರ್ಥಿಕ ನೆರವು ನೀಡಲಾಗಿದೆ.ಕಿಸಾನ್ ಮಿತ್ರ ಮೊಬೈಲ್ ಆಪ್:ಡಿಜಿಟಲ್ ಪರಿವರ್ತನೆ ಕಾರ್ಯಕ್ರಮದ ಭಾಗವಾಗಿ ಕ್ಯಾಂಪ್ಕೊ ಕಿಸಾನ್ ಮಿತ್ರ ಮೊಬೈಲ್ ಆ್ಯಪ್ ಅನ್ನು ಕ್ಯಾಂಪ್ಕೊ ಯಶಸ್ವಿಯಾಗಿ ಬಿಡುಗಡೆಗೊಳಿಸಿದೆ. ಈ ಆ್ಯಪ್ ಮೂಲಕ ಸದಸ್ಯರು ತಮ್ಮ ಪ್ರೊಫೈಲ್, ಷೇರು ವಿವರ, ಡಿವಿಡೆಂಡ್, ಪ್ರೋತ್ಸಾಹಧನ, ಠೇವಣಿ, ಸಾಲ, ಮಾರುಕಟ್ಟೆ ದರ, ಶಾಖೆಗಳ ಮಾಹಿತಿ, ಅಧಿಸೂಚನೆಗಳು, ಕ್ಯಾಂಪ್ಕೊ ಪಡೆ ವಿವರ ಸೇರಿದಂತೆ ಹಲವು ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸುಲಭವಾಗಿ ಪಡೆಯಬಹುದು.ಆನ್ ಲೈನ್ ಶಾಪಿಂಗ್ ವೇದಿಕೆ:ಕ್ಯಾಂಪ್ಕೊ ತನ್ನ ಅಧಿಕೃತ ಆನ್‌ಲೈನ್ ಶಾಪಿಂಗ್ ವೇದಿಕೆ ಕ್ಯಾಂಪ್ಕೊ ಕಾರ್ಟ್ ಅನ್ನು 2025ರ ಡಿಸೆಂಬರ್ 11ರಂದು ಆರಂಭಿಸಿದೆ. ದೇಶಾದ್ಯಂತ ಗ್ರಾಹಕರು ಅಸಲಿ ಕ್ಯಾಂಪ್ಕೊ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಈ ವೇದಿಕೆ ಅವಕಾಶ ಕಲ್ಪಿಸಿದ್ದು, ಸಂಸ್ಥೆಯ ಡಿಜಿಟಲ್ ಪರಿವರ್ತನೆ ಮತ್ತು ನೇರ-ಗ್ರಾಹಕ ಸಂಪರ್ಕದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಎಸ್.ಆರ್. ಸತೀಶ್ಚಂದ್ರ ಹೇಳಿದರು.ಸದೃಢ ಸದಸ್ಯತ್ವ ಮತ್ತು ಆರ್ಥಿಕ ಬುನಾದಿ2026ರ ಮಾರ್ಚ್ 31ರ ಅಂತ್ಯಕ್ಕೆ ಕ್ಯಾಂಪ್ಕೊದ ಒಟ್ಟು ಸದಸ್ಯತ್ವ 1,53,794 ಆಗಿದ್ದು, ಸಂಸ್ಥೆಯ ಒಟ್ಟು ಪಾವತಿಸಿದ ಷೇರು ಬಂಡವಾಳ ₹66.27 ಕೋಟಿ ಆಗಿದೆ. ₹211.42 ಕೋಟಿ ಮೀಸಲು ನಿಧಿ ಮತ್ತು ₹334.15 ಕೋಟಿ ಇತರ ನಿಧಿಗಳು ಸೇರಿ ಒಟ್ಟು ₹545.57 ಕೋಟಿಯೊಂದಿಗೆ ಕ್ಯಾಂಪ್ಕೊದ ಆರ್ಥಿಕ ಬುನಾದಿ ಸದೃಢವಾಗಿ ಮುಂದುವರಿದಿದೆ ಎಂದರು.ಹಸಿರು ಇಂಧನ ಯೋಜನೆಗಳ ಮುಂದುವರಿಕೆ:ಅಸ್ತಿತ್ವದಲ್ಲಿರುವ ಮೂರು ಪವನ ವಿದ್ಯುತ್ ಘಟಕಗಳು 2025-26ರಲ್ಲಿ 39.40 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿ/ ವೀಲಿಂಗ್ ಮಾಡಿದ್ದು, ಇದು ಚಾಕೊಲೇಟ್ ಕಾರ್ಖಾನೆಯ ಒಟ್ಟು ಇಂಧನ ಅಗತ್ಯದ ಸುಮಾರು ಶೇ. 56.81ರಷ್ಟನ್ನು ಪೂರೈಸಿದೆ. ಪುತ್ತೂರಿನ ಸಿಸಿಎಫ್‌ನಲ್ಲಿರುವ 500 ಕಿ.ವ್ಯಾ. ಸೌರ ವಿದ್ಯುತ್ ಯೋಜನೆ 4.79 ಲಕ್ಷ ಯೂನಿಟ್ ಉತ್ಪಾದಿಸಿದ್ದು, ಇದು ಕಾರ್ಖಾನೆಯ ಇಂಧನ ಅಗತ್ಯದ ಸುಮಾರು ಶೇ. 7ರಷ್ಟಾಗಿದೆ. ಮತ್ತೊಂದು 500 ಕಿ.ವ್ಯಾ. ಛಾವಣಿ ಸೌರ ಯೋಜನೆಯ ಕಾರ್ಯಾರಂಭವೂ ಪ್ರಗತಿಯಲ್ಲಿದೆ. ಹೆಚ್ಚುವರಿಯಾಗಿ 580 ಕೆ.ಡಬ್ಲ್ಯೂ. ಸಾಮರ್ಥ್ಯದ ಮೇಲ್ಛಾವಣಿ ಸೌರ ಯೋಜನೆ ಪ್ರಗತಿಯಲ್ಲಿದ್ದು, ಇದು ಹೆಚ್ಚುವರಿ ಶೇ. 8-9ರಷ್ಟು ಇಂಧನ ಬೇಡಿಕೆಯನ್ನು ಪೂರೈಸುವ ನಿರೀಕ್ಷೆಯಿದೆ. ಕ್ಯಾಂಪ್ಕೊ ‘ಮುಕ್ತ ಪ್ರವೇಶ’ದ ಮೂಲಕ ಅಂದಾಜು 15 ಲಕ್ಷ ಯುನಿಟ್ ವಿದ್ಯುತ್ ಖರೀದಿಸಲು ಸಹ ಯೋಜಿಸುತ್ತಿದೆ ಎಂದು ತಿಳಿಸಿದರು.ಶೇಖರಣಾ ಮೂಲಸೌಕರ್ಯ:ಶೇಖರಣೆ ಮತ್ತು ದಾಸ್ತಾನು ನಿರ್ವಹಣಾ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ, ಸಿದ್ಧಪಡಿಸಿದ ಉತ್ಪನ್ನಗಳಿಗಾಗಿ 450 ಮೆಟ್ರಿಕ್ ಟನ್ ಹೆಚ್ಚುವರಿ ಶೇಖರಣಾ ಸಾಮರ್ಥ್ಯದ ‘ಸ್ಟ್ಯಾಂಡರ್ಡ್ ಕೂಲ್ ರೂಮ್’ ನಿರ್ಮಿಸಲು ಕ್ಯಾಂಪ್ಕೊ ಯೋಜಿಸುತ್ತಿದೆ ಎಂದು ಎಸ್.ಆರ್. ಸತೀಶ್ಚಂದ್ರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ನಿರ್ದೇಶಕ ಪುರುಷೋತ್ತಮ ಭಟ್, ಡಿಜಿಎಂ ಗೋವಿಂದ ಭಟ್, ಜನರಲ್ ಮ್ಯಾನೇಜರ್ ರೇಶ್ಮಾ ಮಲ್ಯ ಇದ್ದರು.———–ಬಾಕ್ಸ್ಮುಂದಿನ ಹೆಜ್ಜೆ⦁ ಅಡಕೆ ಖರೀದಿ ಮತ್ತು ಬೆಳೆಗಾರರಿಗೆ ಮಾರುಕಟ್ಟೆ ಬೆಂಬಲದ ಬಲವರ್ಧನೆ⦁ ಶಾಖೆ ಮತ್ತು ಖರೀದಿ ಕೇಂದ್ರಗಳ ಜಾಲದ ವಿಸ್ತರಣೆ⦁ ಸಕ್ರಿಯ ಸದಸ್ಯರಿಗೆ ರಿಯಾಯಿತಿ ದರದ ಕೃಷಿ ಪರಿಕರಗಳ ಮುಂದುವರಿಕೆ⦁ ಬೆಳೆಗಾರ- ಸದಸ್ಯರಿಗೆ 1 ಲಕ್ಷ ಕೊಕ್ಕೊ ಸಸಿಗಳ ವಿತರಣೆ⦁ ಚಾಕೊಲೇಟ್ ವಿಭಾಗದ ಬಲವರ್ಧನೆ ಮತ್ತು ಉತ್ಪಾದನಾ ದಕ್ಷತೆಯ ಸುಧಾರಣೆ⦁ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ವಿಸ್ತರಣೆ⦁ ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ಸದಸ್ಯ ಸೇವೆಗಳ ಪ್ರೋತ್ಸಾಹ⦁ ಅಡಿಕೆ ಮತ್ತು ತೋಟಗಾರಿಕಾ ಬೆಳೆಗಳ ಮೇಲಿನ ವೈಜ್ಞಾನಿಕ ಸಂಶೋಧನೆಗೆ ಬೆಂಬಲ⦁ ಮಣ್ಣು ಪರೀಕ್ಷೆ ಮತ್ತು ಇತರ ರೈತಪರ ಸೇವೆಗಳ ವಿಸ್ತರಣೆ⦁ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಉತ್ಪಾದನಾ ಪದ್ಧತಿಗಳ ಬಲವರ್ಧನೆ⦁ ಸದಸ್ಯ ಕ್ಷೇಮಾಭಿವೃದ್ಧಿ ಮತ್ತು ಸೌಲಭ್ಯ ಯೋಜನೆಗಳ ಮುಂದುವರಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ವಿಸ್ತರಣೆಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ವಿಸ್ತರಿಸುವ ತನ್ನ ಪ್ರಯತ್ನಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ಯಾಂಪ್ಕೊ ‘ನ್ಯಾಷನಲ್ ಕೋ-ಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್’ ಸದಸ್ಯತ್ವ ಪಡೆದುಕೊಂಡಿದೆ. ತನ್ನ ಶಾಖೆಗಳಲ್ಲಿ ಖರೀದಿಸಿ ಸಂಸ್ಕರಿಸಿದ 130 ಮೆ.ಟನ್ ಉತ್ಕೃಷ್ಟ ಗುಣಮಟ್ಟದ ಭಾರತೀಯ ಅಡಕೆಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲಾಗಿದೆ. ಡ್ರಿಂಕಿಂಗ್ ಚಾಕೊಲೇಟ್ ಪುಡಿ ಮತ್ತು ಕೈಗಾರಿಕಾ ಕೊಕ್ಕೊ ಉತ್ಪನ್ನಗಳೂ ರಫ್ತಿನಲ್ಲಿ ಸೇರಿವೆ ಎಂದು ಎಸ್.ಆರ್. ಸತೀಶ್ಚಂದ್ರ ತಿಳಿಸಿದರು.

LEAVE A REPLY

Please enter your comment!
Please enter your name here