


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಳೆದುಹೋದ ಗತ ವೈಭವವನ್ನು ಮರಳಿ ಸ್ಥಾಪಿಸುವುದೇ ನನ್ನ ಮೊದಲ ಆದ್ಯತೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.





ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಲು ಪಣ ತೊಟ್ಟಿರುವುದಾಗಿ ಘೋಷಿಸಿದರು. ಇದಕ್ಕಾಗಿ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರ ಸಹಕಾರ ಪಡೆಯುವುದಾಗಿ ಹೇಳಿದರು.


ಚುನಾವಣಾ ಸ್ಪರ್ಧೆಯ ಆಸೆ ಇಲ್ಲ:
ವೈಯಕ್ತಿಕವಾಗಿ ಮುಂದಿನ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವ ಆಸೆ ನನಗಿಲ್ಲ. ಪಕ್ಷ ಸಂಘಟನೆ ಮತ್ತು ಪಕ್ಷದ ಗತ ವೈಭವ ಮರಳಿಸುವುದಷ್ಟೇ ನನ್ನ ಅಂತಿಮ ಗುರಿ ಎಂದು ಪುನರುಚ್ಚರಿಸಿದ ಪದ್ಮರಾಜ್ ಆರ್. ಪೂಜಾರಿ, ಮುಂಬರುವ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸಬೇಕಿದೆ. ಜತೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಪಕ್ಷ ಸಂಘಟನೆ ಮಾಡಲಿದ್ದೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ, ‘ಕಾಂಗ್ರೆಸ್ ಬಣ’ ಒಂದೇ ಇರುವುದು. ಅಸಮಾಧಾನಗೊಂಡಿರುವ ಅಥವಾ ಪಕ್ಷದಿಂದ ದೂರ ಉಳಿದಿರುವ ಹಿರಿಯರನ್ನು ಹಾಗೂ ಕಾರ್ಯಕರ್ತರನ್ನು ಒಂದೇ ಸೂರಿನಡಿ ತರುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ನಾಲ್ಕು ಗೋಡೆಗಳ ನಡುವೆ ಕುಳಿತು ಬಗೆಹರಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಸಾಮರಸ್ಯ ಮತ್ತು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಜಿಲ್ಲೆಯಲ್ಲಿ ಈ ಹಿಂದಿನ ಅಭಿವೃದ್ಧಿ ಕಾರ್ಯಗಳೆಲ್ಲವೂ ಕಾಂಗ್ರೆಸ್ ಕೊಡುಗೆ. ಆದರೆ ವಿರೋಧ ಪಕ್ಷಗಳು ಜಾತಿ, ಧರ್ಮ, ಕೋಮು ಭಾವನೆಗಳನ್ನು ಹಾಗೂ ಭಾವನಾತ್ಮಕ ವಿಚಾರಗಳನ್ನು ಬಳಸಿ ಚುನಾವಣೆಗಳನ್ನು ಗೆದ್ದಿದೆ. ಈಗ ಜನರು ಸತ್ಯ ಅರಿತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕಾರ್ಯಕರ್ತರ ಬಲಿಷ್ಠ ಪಡೆ ಇದೆ. ಇದನ್ನು ಇನ್ನಷ್ಟು ಸಂಘಟಿತಗೊಳಿಸುವ, ಶಿಸ್ತು ತರುವ ಕಾರ್ಯಕ್ಕೆ ಒತ್ತು ನೀಡಲಿದ್ದೇನೆ ಎಂದು ಪದ್ಮರಾಜ್ ಪೂಜಾರಿ ಹೇಳಿದರು.
ಗೆಲ್ಲುವ ಅಭ್ಯರ್ಥಿಗಳ ಆಯ್ಕೆ:
ಮುಂಬರುವ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗೆಲ್ಲುವ ಮಾನದಂಡವನ್ನಷ್ಟೇ ಪರಿಗಣಿಸಿ, ಶ್ರಮಿಕ ಹಾಗೂ ಯುವ ಮುಖಗಳಿಗೆ ಅವಕಾಶ ನೀಡಲಾಗುವುದು ಎಂದರು.
ದೇಶಾದ್ಯಂತ ಕಾಂಗ್ರೆಸ್ ಪರ ವಾತಾವರಣ ಸೃಷ್ಟಿಯಾಗುತ್ತಿದ್ದು, 2028ರಲ್ಲಿ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರ ಕಾರ್ಯ ಯೋಜನೆಯಂತೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. 2029ರಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಲಿದ್ದಾರೆ. ಅದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪೂರ್ಣ ಬೆಂಬಲ ನೀಡಲಾಗುವುದು ಎಂದು ಪದ್ಮರಾಜ್ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.
ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಅಪ್ಪಿ, ಶುಭೋದಯ ಆಳ್ವ ಮತ್ತಿತರರು ಇದ್ದರು.








