


ಮಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ ಅವರು ನಮಸ್ತೆ ಸದಾವತ್ಸಲೆ ಹಾಡು ಹಾಡಿ ಆರೆಸ್ಸೆಸ್ ಸದಸ್ಯರಿಂದ ರಾಖಿ ಕಟ್ಟಿಸಿಕೊಳ್ಳುವವರೆಗೆ ಮುಖ್ಯಮಂತ್ರಿ ಅವರ ಆರೆಸ್ಸೆಸ್ ಜತೆಗಿನ ಮೈತ್ರಿ ಮುಂದುವರಿದಿದೆ. ಆದರೆ ಇಬ್ಬರು ಶಿಕ್ಷಕರು ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ ಕಾರಣಕ್ಕೆ ಅಮಾನತು ಮಾಡಿರುವುದು ಸರಿಯಾ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪ್ರಶ್ನಿಸಿದ್ದಾರೆ.





ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಒಂದು ಎನ್ಜಿಒ ಮತ್ತು ರಾಜಕೀಯ ಸಂಘಟನೆಯಲ್ಲ ಎಂದು ಆರೆಸ್ಸೆಸ್ ಸರಸಂಘಚಾಲಕರೇ ಹೇಳಿದ್ದಾರೆ. ಹೀಗಿರುವಾಗ ಶಿಕ್ಷಕರ ಅಮಾನತು ಮಾಡಿರುವುದು ಯಾಕೆ? ಹಲವು ಎನ್ಜಿಒಗಳ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಭಾಗವಹಿಸುತ್ತಾರೆ. ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿದವರನ್ನು ಮಾತ್ರ ಅಮಾನತು ಮಾಡಿರುವುದು ಸರಿಯಲ್ಲ ಎಂದರು.


ಆರೆಸ್ಸೆಸ್ ನೋಂದಣಿ ಆಗಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಧ್ವನಿ ಎತ್ತಿದ್ದರು. ನಾನು ಆರೆಸ್ಸೆಸ್ ನ್ನು ನೋಂದಣಿ ಮಾಡಲು ಬಯಸಿದ್ದೇನೆ. ಆರೆಸ್ಸೆಸ್ ನಲ್ಲಿ ದಲಿತರಿಗೆ ಸರಿಯಾದ ಅವಕಾಶ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ನಾನು ಸ್ಥಾಪಿಸಲಿರುವ ಆರೆಸ್ಸೆಸ್ ನ ಪ್ರಥಮ ಸರಸಂಘಚಾಲಕರಾಗಿ ಪ್ರಿಯಾಂಕ್ ಖರ್ಗೆಯವರೇ ಆಗಬೇಕೆಂದು ಒತ್ತಾಯಿಸುತ್ತೇನೆ. ಈ ಸಂಘಟನೆಗೆ ಹೆಸರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದೇ ಬೇಕೇ ಅಥವಾ ಆರೆಸ್ಸೆಸ್ ಎಂದು ಬರುವ ರೀತಿಯಲ್ಲಿ ಬೇರೆ ಯಾವುದಾದರೂ ಹೆಸರು ಇಡಬೇಕೇ ಎಂಬ ಚರ್ಚೆಗೆ ಅವಕಾಶವಿದೆ. ರಾಜ್ಯದ ಜನತೆ ಬೇರೆ ಹೆಸರು ಸೂಚಿಸಲು ಇಚ್ಛಿಸಿದ್ದಲ್ಲಿ ತಿಳಿಸಬಹುದು ಎಂದು ಅನುಪಮಾ ಶೆಣೈ ಹೇಳಿದರು.








