ಸಂಪುಟ ಸಭೆಯಲ್ಲಿ ಬಡವರ ಪರ ಯೋಜನೆಗಳ ಜಾರಿಗೆ ಮಾಜಿ ಸಚಿವ ರಮಾನಾಥ ರೈ ಮನವಿ – ದೈವಸ್ಥಾನ ಚಾಕರಿಯವರಿಗೆ ವೇತನ ಶ್ರೇಣಿ ಅಥವಾ ಮಾಸಾಶನ – ಪ. ಜಾತಿ, ಪ. ಪಂ ಸಮುದಾಯಕ್ಕೆ ಡಿಸಿ ಮನ್ನಾ ಜಮೀನು, ಕೊರಗರಿಗೆ ಭೂಮಿ ಹಕ್ಕು ನೀಡಲು ಒತ್ತಾಯ

ಮಂಗಳೂರು: ಮಂಗಳೂರಿನಲ್ಲಿ ಸೆ.18ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ. ಈ ಸಭೆಯ ಮೂಲಕ ಕರಾವಳಿ ಭಾಗದ ಪ್ರಮುಖ ಬೇಡಿಕೆಗಳನ್ನು, ಬಡವರ ಪರ ಯೋಜನೆಗಳನ್ನು ಜಾರಿಗೊಳಿಸಬೇಕಿದೆ ಎಂದು ಮಾಜಿ ಸಚಿವ ಬಿ. ರಮಾನಾಥ್ ರೈ ಮನವಿ ಮಾಡಿದ್ದಾದರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವಸ್ಥಾನಗಳಲ್ಲಿ ಸೇವೆ ಸಲ್ಲಿಸುವ ಚಾಕರಿಯವರು, ಪಾತ್ರಿಗಳು, ಗಡಿಕಾರರು ಮುಂತಾದ ಅಸಂಘಟಿತ ಸೇವಾಕರ್ತರಿಗೆ ಮುಜರಾಯಿ ಇಲಾಖೆಯ ‘ಸಾಮಾನ್ಯ ಸಂಗ್ರಹಣ ನಿಧಿ’ಯನ್ನು ಬಳಸಿ ವೇತನ ಶ್ರೇಣಿ ಅಥವಾ ಮಾಸಾಶನ ಸೌಲಭ್ಯ ಒದಗಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಡ ಜನರಿಗೆ ‘ಡಿಸಿ ಮನ್ನಾ’ ಭೂಮಿಯನ್ನು ಆದ್ಯತೆಯ ಮೇಲೆ ವಿತರಿಸಲು ಕ್ರಮ ಕೈಗೊಳ್ಳಬೇಕು. ಕೊರಗರಿಗೆ ಮಹಮ್ಮದ್ ಪೀರ್ ವರದಿಯನ್ನು ಜಾರಿಗೊಳಿಸಬೇಕು. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು. ಈ ಕುರಿತು ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಲಿ:

ಈ ಸಂಪುಟ ಸಭೆಯಲ್ಲಿ ತುಳು ಭಾಷೆ ಕರ್ನಾಟಕದ 2ನೇ ಅಧಿಕೃತ ರಾಜ್ಯಭಾಷೆಯಾಗಿ ಘೋಷಣೆ ಆಗುವ ನಿರೀಕ್ಷೆ ಇದೆ. ತುಳು ಭಾಷೆಯನ್ನು ರಾಜ್ಯದ 2ನೇ ಭಾಷೆ ಮಾಡಲು ಒತ್ತಾಯಿಸುವ ಬಿಜೆಪಿ ಶಾಸಕರು ಮತ್ತು ಸಂಸದರು, ಕೇಂದ್ರದಲ್ಲಿ ತಮ್ಮದೇ ಸರ್ಕಾರವಿದ್ದರೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳುವನ್ನು ಸೇರ್ಪಡೆಗೊಳಿಸಲು ಏಕೆ ಶ್ರಮಿಸುತ್ತಿಲ್ಲ? ಮೊದಲು ಆ ಕೆಲಸ ಮಾಡಲಿ ಎಂದು ರಮಾನಾಥ ರೈ ಸವಾಲು ಹಾಕಿದರು.

ಗೋವಾ ಮತ್ತು ಕೇರಳ ಮಾದರಿಯಲ್ಲಿ ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು ಸರಳೀಕರಿಸಿ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸ ಆಗಲಿದೆ ಎಂದರು.

ಬಿಜೆಪಿಗೆ ಸಂಪುಟ ಸಭೆ ಇಷ್ಟ ಇಲ್ಲವೇ?:

ಕೇವಲ ಜಾಮರ್ ಇತ್ಯಾದಿ ಸಮಸ್ಯೆ ಮುಂದಿಟ್ಟು ಸಂಪುಟ ಸಭೆಯ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿರುವ ಬಿಜೆಪಿ ನಾಯಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ರಮಾನಾಥ ರೈ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಯುವುದು ಬಿಜೆಪಿಯವರಿಗೆ ಇಷ್ಟವಿಲ್ಲವೇ?” ಎಂದು ಪ್ರಶ್ನಿಸಿದರು.

ಮಂಗಳೂರಿನ ಸುಸಜ್ಜಿತ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ (ಪ್ರಜಾಸೌಧ) ನಿರ್ಮಾಣಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಹಿಂದಿನ ಅವಧಿಯಲ್ಲೇ ಚಾಲನೆ ನೀಡಿ, ಎನ್‌ಜಿಟಿ ತೊಡಕುಗಳನ್ನು ನಿವಾರಿಸಿ ಯೋಜನೆ ಸಾಕಾರಗೊಳಿಸಲಾಗಿತ್ತು. ಅದು ನನ್ನ ಕನಸಾಗಿತ್ತು. ಈಗ ಅಲ್ಲೇ ಸಂಪುಟ ಸಭೆ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಕಾಂಗ್ರೆಸ್ ಸರ್ಕಾರ ಸದಾ ಬಡವರ, ಶೋಷಿತರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೆ ತಂದರೆ, ಬಿಜೆಪಿ ಸರ್ಕಾರ ಶ್ರೀಮಂತರು ಹಾಗೂ ಕಾರ್ಪೊರೇಟ್‌ಗಳ ಜೇಬು ತುಂಬಿಸುವ ಕೆಲಸ ಮಾಡುತ್ತಿದೆ ಎಂದು ರಮಾನಾಥ ರೈ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಾಹುಲ್ ಹಮೀದ್, ಬಿ.ಎಲ್. ಪದ್ಮನಾಭ ಕೋಟ್ಯಾನ್, ಅಪ್ಪಿ, ಆರ್.ಕೆ. ಪೃಥ್ವಿರಾಜ್, ನೀರಜ್ ಪಾಲ್, ನವಾಝ್, ಯೋಗೀಶ್ ಕುಮಾರ್, ನಝೀರ್ ಬಜಾಲ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here