


ಮಂಗಳೂರು: ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆ, ತುಳುನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲು. ಕರಾವಳಿಯ ಮಾನವ ಸಂಪನ್ಮೂಲ, ಯುವಜನತೆಯ ಸಾಮರ್ಥ್ಯ, ಶಿಕ್ಷಣ, ಪ್ರವಾಸೋದ್ಯಮ, ಆರೋಗ್ಯ, ಸಾರಿಗೆ, ಬಂದರು ಹಾಗೂ ಧಾರ್ಮಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ 50ಕ್ಕೂ ಹೆಚ್ಚು ಪ್ರಮುಖ ಅಜೆಂಡಾಗಳು ಸಂಪುಟದ ಮುಂದೆ ಮಂಡನೆಯಾಗಲಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.





ಸೆ.18ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ನಗರದ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ಸಿದ್ಧತಾ ಕೆಲಸಗಳನ್ನು ಪರಿಶೀಲಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


ರಾಜಧಾನಿ ಬೆಂಗಳೂರಿನಿಂದ ಹೊರಗೆ ಸಚಿವ ಸಂಪುಟ ಸಭೆ ನಡೆಸುವುದಾದರೆ ಅದನ್ನು ಮಂಗಳೂರಿನಲ್ಲೇ ನಡೆಸಬೇಕೆಂಬ ವಿನಂತಿಗೆ ಸ್ಪಂದಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊಟ್ಟ ಮಾತಿನಂತೆ ಈ ಐತಿಹಾಸಿಕ ಸಭೆಯನ್ನು ಆಯೋಜಿಸಿದ್ದಾರೆ. ಸಾರ್ವಜನಿಕರು ಮತ್ತು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಸಲ್ಲಿಸಿರುವ ಬಹುತೇಕ ನ್ಯಾಯಯುತ ಬೇಡಿಕೆಗಳಿಗೆ ಸಂಪುಟ ಸಭೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಬಸ್ಸಿನಲ್ಲಿ ಆಗಮಿಸಲಿರುವ ಸಿಎಂ, ಮಂತ್ರಿಗಳು:
ಶುಕ್ರವಾರ ಬೆಳಗ್ಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ಸಂಪುಟದ ಎಲ್ಲ ಸಚಿವರು ಡಬಲ್ ಡೆಕ್ಕರ್ ಅಥವಾ ಓಪನ್ ಬಸ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಆಗಮಿಸುತ್ತಾರೆ. ಪ್ರಜಾ ಸೌಧದ 2ನೇ ಮಹಡಿಯಲ್ಲಿರುವ ಕ್ಯಾಬಿನೆಟ್ ಹಾಲ್ನಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ ಎಂದು ಯು.ಟಿ. ಖಾದರ್ ತಿಳಿಸಿದರು.
ಪ್ರತಿಭಟನೆಗಳಿಗೆ ತಿರುಗೇಟು:
ಸಚಿವ ಸಂಪುಟ ಸಭೆಯ ಸಂದರ್ಭ ವಿವಿಧ ಸಂಘಟನೆಗಳು ಹಾಗೂ ವಿಪಕ್ಷಗಳು ಹಮ್ಮಿಕೊಂಡಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಜೈಲಿನಲ್ಲಿ ಜ್ಯಾಮರ್ ಅಳವಡಿಕೆ ಹಾಗೂ ನಿಯಮಗಳು ಕಾರಾಗೃಹ ನೀತಿಗೆ ಒಳಪಟ್ಟಿರುತ್ತವೆ. ಸಮಸ್ಯೆ ಪರಿಹಾರಕ್ಕಾಗಿ ಜೈಲನ್ನೇ ಬೇರೆಡೆಗೆ ಸ್ಥಳಾಂತರಿಸಲು ಬಜೆಟ್ನಲ್ಲಿ ಅನುದಾನ ಕೋರಲಾಗಿದೆ. ಹೀಗಿರುವಾಗ ಸಭೆಯ ಸಂದರ್ಭದಲ್ಲಿ ಅನಗತ್ಯ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ. ಅದೇ ರೀತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಉಚಿತ ಸೇವೆಯನ್ನೇ ನೀಡಲಾಗುತ್ತಿದೆ. ಬಡವರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿರುವುದನ್ನು ವಿರೋಧಿಸುವುದು ತರ್ಕಹೀನ ಎಂದು ತಿರುಗೇಟು ನೀಡಿದರು.
ಅತಿಥಿ ಸತ್ಕಾರಕ್ಕೆ ಕರೆ:
ಇಡೀ ರಾಜ್ಯವೇ ಕರಾವಳಿಯತ್ತ ನೋಡುತ್ತಿರುವ ಈ ಸಂಭ್ರಮದ ಕ್ಷಣದಲ್ಲಿ, ಎಲ್ಲ ಪಕ್ಷಗಳು, ಸಂಘಟನೆಗಳು ಹಾಗೂ ನಾಗರಿಕರು ಒಗ್ಗೂಡಿ ರಾಜ್ಯದ ನಾಯಕರಿಗೆ ಸೌಹಾರ್ದಯುತ ಸ್ವಾಗತ ಕೋರಬೇಕು. ತುಳುನಾಡಿನ ‘ಅತಿಥಿ ಸತ್ಕಾರ’ ಸಂಸ್ಕೃತಿಗೆ ಕಪ್ಪುಚುಕ್ಕೆ ಬಾರದಂತೆ ಸಹಕರಿಸಬೇಕು ಎಂದು ಯು.ಟಿ. ಖಾದರ್ ಮನವಿ ಮಾಡಿದರು.
———–
ಪೊಲೀಸ್ ಇಲಾಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ: ಖಾದರ್ ಸ್ಪಷ್ಟನೆ
ಇತ್ತೀಚೆಗೆ ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಗೈರುಹಾಜರಿ ಕುರಿತು ತಮ್ಮ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸಚಿವ ಯು.ಟಿ. ಖಾದರ್, ಮಂಗಳೂರು ಪೊಲೀಸ್ ಕಮಿಷನರ್ ಅವರ ದಕ್ಷತೆ ಹಾಗೂ ಹಿಂದಿನ ಅನುಭವಗಳನ್ನು ಪರಿಗಣಿಸಿ, ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಸಚಿವರೊಂದಿಗೆ ಚರ್ಚಿಸಿ ಅವರನ್ನು ಈ ಜಿಲ್ಲೆಗೆ ನಿಯೋಜಿಸಲಾಗಿತ್ತು. ಆದರೆ ಕೆಡಿಪಿ ಸೇರಿದಂತೆ ಸರ್ಕಾರಿ ಸಭೆಗಳಿಗೆ ಹಾಜರಾಗುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯ. ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗದಿದ್ದರೆ ಲಿಖಿತ ರೂಪದಲ್ಲಿ ಅಥವಾ ದೂರವಾಣಿ ಮೂಲಕ ಮುಂಚಿತವಾಗಿ ಮಾಹಿತಿ ನೀಡುವುದು ಆಡಳಿತಾತ್ಮಕ ನಿಯಮ. ಅದನ್ನು ಪಾಲಿಸಲು ಸೂಚಿಸುವುದರಿಂದ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲ. ಇಲಾಖೆಯ ಕೆಲಸ ಕಾರ್ಯಗಳಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಧಾರ್ಮಿಕ ಕೇಂದ್ರಗಳಿಗೆ ಮೈಕ್ ಬಳಕೆ ಮುಂತಾದ ಸಾರ್ವಜನಿಕ ಅಗತ್ಯಗಳಿಗೆ ನಿಯಮಾನುಸಾರ ಸಡಿಲಿಕೆ ನೀಡುವುದನ್ನು ಹೊರತುಪಡಿಸಿ, ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಸಂಪೂರ್ಣ ಸ್ವತಂತ್ರ ಅಧಿಕಾರ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಮೇಲ್ಮನವಿಗೆ ಸಿದ್ಧತೆ:
ರೆಹಮಾನ್ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ದೊರೆತ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದು ಸರ್ಕಾರದ ವೈಫಲ್ಯವಲ್ಲ, ನ್ಯಾಯಾಲಯದ ಪ್ರಕ್ರಿಯೆ. ಆರೋಪಿಗಳು ಇನ್ನೂ ಜೈಲಿನಲ್ಲೇ ಇದ್ದಾರೆ, ಅವರ ಮೇಲೆ ಗೂಂಡಾ ಕಾಯ್ದೆಯೂ ಇದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿವೆ. ಈ ರೀತಿಯ ಕ್ರೂರ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗುವವರೆಗೂ ಸರ್ಕಾರ ಕಾನೂನು ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಮುಖಂಡ ಮಿಥುನ್ ರೈ ಇದ್ದರು.








