


ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಬೀಡಿಗಾಗಿ ಗ್ಯಾಸ್ ಸಿಲಿಂಡರ್ ಸ್ಫೋಟ ಮಾಡುವುದಾಗಿ ಜೈಲು ಅಧೀಕ್ಷಕರಿಗೆ ಬೆದರಿಕೆ ಹಾಕಿದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





ವಿಚಾರಣಾಧೀನ ಕೈದಿ ಮೊಹಮ್ಮದ್ ಫೈಝಲ್ ಎಂಬಾತ ಸೆ. 14ರಂದು ಬೆಳಗ್ಗೆ ಸುಮಾರು 8:10ರ ವೇಳೆಗೆ ಕಾರಾಗೃಹದ ಅಡುಗೆ ಕೋಣೆಗೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಕೈದಿಗಳಿಗೆ “ಅಧೀಕ್ಷಕರು ಬೀಡಿ ನೀಡುವವರೆಗೂ ಅಡುಗೆ ತಯಾರಿಸಬಾರದು” ಎಂದು ಬೆದರಿಕೆ ಹಾಕಿ ಅಡ್ಡಿಪಡಿಸಿದ್ದಾನೆ. ನಂತರ ಇತರ ಕೆಲ ಕೈದಿಗಳ ಜತೆ ಅಧೀಕ್ಷಕರ ಕಚೇರಿ ಬಳಿ ಬಂದು, ಬೀಡಿ ಕೊಡುವವರೆಗೂ ಅಡುಗೆ ಮಾಡಲು ಬಿಡುವುದಿಲ್ಲ. ಒಂದು ವೇಳೆ ಅಡುಗೆ ಸಿದ್ಧಪಡಿಸಿದರೆ ಅದರಲ್ಲಿ ಹಲ್ಲಿ ಅಥವಾ ಜಿರಳೆ ಹಾಕಿ ದೊಡ್ಡ ರಂಪಾಟ ಸೃಷ್ಟಿಸಿ ನಿಮ್ಮನ್ನು ಇಲ್ಲಿಂದ ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.


ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಸಿಬ್ಬಂದಿ ಸಂಜೆ 3:45ರ ಸುಮಾರಿಗೆ ಅಡುಗೆ ಕೋಣೆಯ ಗೇಟ್ಗೆ ಬೀಗ ಹಾಕಿದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಫೈಝಲ್, ಅಲ್ಲೇ ಇದ್ದ ಗ್ಯಾಸ್ ಸಿಲಿಂಡರ್ ಎತ್ತಿ ಅಡುಗೆ ಮನೆಯ ಗೇಟ್ ಮತ್ತು ಬೀಗಕ್ಕೆ ಬಡಿದು ಜಖಂಗೊಳಿಸಲು ಯತ್ನಿಸಿದ್ದಾನೆ. ತಕ್ಷಣ ಬೀಗ ತೆರೆಯದಿದ್ದರೆ ಸಿಲಿಂಡರ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈತನ ವಿರುದ್ಧ ಜೈಲು ಅಧೀಕ್ಷಕರು ನೀಡಿದ ದೂರಿನ ಮೇರೆಗೆ ಬರ್ಕೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.








