


ಮಂಗಳೂರು: 2020ರಲ್ಲಿ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಮಿಕನೊಬ್ಬನಿಗೆ ಕಬ್ಬಿಣದ ರಾಡ್ ತೋರಿಸಿ ಮೊಬೈಲ್ ದರೋಡೆ ಮಾಡಿದ್ದ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 25,000 ರು. ದಂಡ ವಿಧಿಸಿ ತೀರ್ಪು ನೀಡಿದೆ.





ಮಂಗಳೂರು ಕೆಂಜಾರು ಗ್ರಾಮದ ಪೋರ್ಕೋಡಿ ನಿವಾಸಿ ಜಾವೀದ್ ಅಖ್ತರ್ ಅಲಿಯಾಸ್ ಅಖ್ತರ್ (28), ಕಸಬಾ ಬೆಂಗ್ರೆ ನಿವಾಸಿ ತೋಯಿದ್ ಖಾದರ್ ಯಾನೆ ತೋಯಿ (24) ಅಪರಾಧಿಗಳು.
2020ರ ನ. 16ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಬಿಹಾರ ಮೂಲದ ಕಾರ್ಮಿಕ ಗೋವಿಂದ್ ಕುಮಾರ್ ಎಂಬವರು ಪಣಂಬೂರಿನ ದೀಪಕ್ ಪೆಟ್ರೋಲ್ ಬಂಕ್ ಹಿಂಭಾಗದ ಎನ್ಎಂಪಿಎ ಮುಖ್ಯ ಆಡಳಿತ ಕಚೇರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ಕೂಟರ್ನಲ್ಲಿ ಬಂದ ಆರೋಪಿಗಳು ಅವರನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್ ತೋರಿಸಿ ಜೀವ ಬೆದರಿಕೆಯೊಡ್ಡಿ 5,000 ರು. ಮೌಲ್ಯದ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದರು.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಣಂಬೂರು ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಅಜ್ಮತ್ ಆಲಿ ಅವರು ಮರುದಿನವೇ ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆಯು ಮೊದಲು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಭಾಗಶಃ ನಡೆದು, ನಂತರ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಬದ್ರಿನಾಥ ನೈಯಾರಿ ವಾದ ಮಂಡಿಸಿದ್ದರು.









