ಬೆಳಪುವಿನಲ್ಲಿ ಕ್ರೀಡಾ ವಿವಿ, ಕೋಸ್ಟಲ್ ಕಾರಿಡಾರ್ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಮಂಜುನಾಥ ಭಂಡಾರಿ ಪ್ರಸ್ತಾವನೆ

ಮಂಗಳೂರು: ಬೆಳಪುವಿನಲ್ಲಿ ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾಲಯ, ತಲಪಾಡಿಯಿಂದ ಬೈಂದೂರಿನವರೆಗೆ ಕೋಸ್ಟಲ್ ಕಾರಿಡಾರ್ ರಸ್ತೆ, ಕೊಣಾಜೆ– ಮಣಿಪಾಲ ಮೆಟ್ರೋ ರೈಲು ಹಾಗೂ ಮೀನುಗಾರಿಕಾ ಕಾಲೇಜಿಗೆ ಸ್ವಾಯತ್ತ ವಿವಿ ಸ್ಥಾನಮಾನ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಸರ್ಕಾರ ಮತ್ತು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿ ಅನುಮೋದನೆಗೆ ಕೋರಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಎಲ್ಲ ಇಲಾಖೆ ಕಾರ್ಯದರ್ಶಿಗಳೇ ಮುತುವರ್ಜಿ ವಹಿಸಿ ಕರಾವಳಿಯ ಅಗತ್ಯತೆಗಳ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದರು.

ಪ್ರಮುಖ ಬೇಡಿಕೆಗಳು: ಬೆಳಪುವಿನಲ್ಲಿ ರಾಜ್ಯದ ಪ್ರಥಮ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯ ಬೇಡಿಕೆ ಇರಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 7:30ಕ್ಕೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಅದೇ ರೀತಿ ಮಂಗಳೂರು ಮೀನುಗಾರಿಕಾ ಕಾಲೇಜಿಗೆ ಸ್ವಾಯತ್ತತೆ ಅಥವಾ ಪ್ರತ್ಯೇಕ ವಿವಿ ಸ್ಥಾನಮಾನ, ತಲಪಾಡಿಯಿಂದ ಬೈಂದೂರಿನವರೆಗೆ ಕೋಸ್ಟಲ್ ಕಾರಿಡಾರ್ ರಸ್ತೆ ನಿರ್ಮಾಣ, ಕೊಣಾಜೆಯಿಂದ ಮಣಿಪಾಲದವರೆಗೆ ಮೆಟ್ರೋ ರೈಲು, ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜು ಮೇಲ್ದರ್ಜೆಗೆ, 100-150 ಎಕರೆಯಲ್ಲಿ ಸ್ಟಾರ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ ಸ್ಥಾಪನೆ, ಸುಬ್ರಹ್ಮಣ್ಯದಿಂದ ಗೋಕರ್ಣವರೆಗೆ ‘ಟೆಂಪಲ್ ಟೂರಿಸಂ ಸರ್ಕ್ಯೂಟ್’ ನೆಟ್ವರ್ಕ್ ರೂಪಿಸಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು, ಅಳಿವಿನಂಚಿನಲ್ಲಿರುವ ಹಿಂದುಳಿದ ವರ್ಗಗಳ ಕಲೆಗಳಿಗೆ 10 ಕೋಟಿ ರು. ಬಜೆಟ್ ಮೀಸಲಿಡುವುದು, ಮಂಗಳಾ ಕ್ರೀಡಾಂಗಣ ಮೇಲ್ದರ್ಜೆಗೇರಿಸುವುದು, ಪಿಲಿಕುಳ ಅಭಿವೃದ್ಧಿ ಮತ್ತು ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ ಇತ್ಯಾದಿ ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಲಾಗಿದೆ ಎಂದು ಮಂಜುನಾಥ ಭಂಡಾರಿ ತಿಳಿಸಿದರು.

ಮೆಸ್ಕಾಂ ಅದ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಚಿತ್ತರಂಜನ್ ಶೆಟ್ಟಿ, ಶುಭೋದಯ ಆಳ್ವ, ಎಂ.ಎಸ್. ಮಹಮ್ಮದ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here