


ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ನಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಹಾಗೂ ಮುಡಿಪುವಿನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಕಾರಾಗೃಹದ ಕಾಮಗಾರಿ ವಿಳಂಬದ ಕುರಿತು ‘ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ’ (ಎಚ್.ಆರ್.ಎಫ್.ಐ) ದಕ್ಷಿಣ ಕನ್ನಡ ಜಿಲ್ಲಾ ಘಟಕವು ವಿಸ್ತೃತ ಸ್ಥಳ ಪರಿಶೀಲನೆ ನಡೆಸಿ, ರಾಜ್ಯ ಮಾನವ ಹಕ್ಕು ಆಯೋಗಕ್ಕೆ ವರದಿ ಸಲ್ಲಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ. ಶೇಷಪ್ಪ ಬಂಬಿಲ ತಿಳಿಸಿದ್ದಾರೆ.





ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ನಿಂದಾಗಿ ಸುಮಾರು 1 ಕಿ.ಮೀ. ಸುತ್ತಮುತ್ತಲಿನ ಸಾರ್ವಜನಿಕರ ಮೊಬೈಲ್ ಸಂಪರ್ಕಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಈ ಕುರಿತು 2025ರ ಮೇ 3ರಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರಿನ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕರಿಗೆ ಆಯೋಗ ಆದೇಶಿಸಿತ್ತು. ಅಲ್ಲದೆ, ಸಂಸ್ಥೆಯ ದೂರನ್ನು ಆಧರಿಸಿ ಸ್ಥಳ ಪರಿಶೀಲನಾ ವರದಿ ಸಲ್ಲಿಸುವಂತೆ ಈ ವರ್ಷ ಆ.14ರಂದು ಎಚ್ಆರ್ಎಫ್ಐ ಸಂಸ್ಥೆಗೆ ಆಯೋಗವು ನಿರ್ದೇಶನ ನೀಡಿತ್ತು.


ಅದರಂತೆ ಆ.29ರಂದು ಎಚ್ಆರ್ಎಫ್ಐ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನೊಳಗೊಂಡ ತಂಡ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದ ಅಧೀಕ್ಷಕರೊಂದಿಗೆ ಚರ್ಚಿಸಿ ಪ್ರಸ್ತುತ ಚಾಲನೆಯಲ್ಲಿರುವ ಸುಮಾರು 5 ಮೊಬೈಲ್ ಜಾಮರ್ಗಳನ್ನು ವೀಕ್ಷಿಸಲಾಯಿತು. ಸೆ.7ರಂದು ಬಿ. ಶೇಷಪ್ಪ ಬಂಬಿಲ ಅವರ ನೇತೃತ್ವದ 6 ಜನರ ನಿಯೋಗವು ಮುಡಿಪುವಿನ ನೂತನ ಕಾರಾಗೃಹದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ನೂತನ ಕಾರಾಗೃಹದ ಕಾಮಗಾರಿ ಸಂಪೂರ್ಣಗೊಳ್ಳಲು ಇನ್ನೂ ಸುಮಾರು ₹ 200 ಕೋಟಿ ರೂಪಾಯಿಗಳ ಅನುದಾನ ಅಗತ್ಯವಿದೆ. ಕಟ್ಟಡ ನಿರ್ಮಾಣ ಪೂರ್ಣಗೊಂಡು ಜೈಲು ಸ್ಥಳಾಂತರಗೊಳ್ಳಲು ಕನಿಷ್ಠ 2ರಿಂದ 3 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಶೇಷಪ್ಪ ತಿಳಿಸಿದ್ದಾರೆ. ಸಂಪೂರ್ಣ ಮಾಹಿತಿಯ ವರದಿಯನ್ನು ಒಂದು ವಾರದೊಳಗೆ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಲಾಗುವುದು ಎಂದೂ ತಿಳಿಸಿದ್ದಾರೆ.
ನಿಯೋಗದಲ್ಲಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಲಪೆ, ನಿಕಟಪೂರ್ವ ಕಾರ್ಯದರ್ಶಿ ಸದಾಶಿವ, ನಿರ್ದೇಶಕರಾದ ಶ್ರೀನಿವಾಸ್, ಜೇಮ್ಸ್ ಪ್ರವೀಣ್ ಹಾಗೂ ರಾಜೇಂದ್ರ ಡಿಸೋಜ ಇದ್ದರು.








