ಮಂಗಳೂರು ನಗರಾಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆ – ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನಾ ಸಭೆ – ನಗರ ಸೇವೆಗಳ ಡಿಜಿಟಲೀಕರಣಕ್ಕೆ ಆದ್ಯತೆ, ಒಳಚರಂಡಿ ವಿಸ್ತರಣೆಗೆ ಸೂಚನೆ

ಮಂಗಳೂರು: ಮಂಗಳೂರು ನಗರಾಭಿವವೃದ್ಧಿ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಮತ್ತು ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರ ಸೇವೆಗಳ ಡಿಜಿಟಲೀಕರಣಕ್ಕೆ ಆದ್ಯತೆ:

ರಾಜ್ಯದ 13 ಮಹಾನಗರ ಪಾಲಿಕೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪಾಲಿಕೆಗಳ ಎಲ್ಲ ಸೇವೆಗಳು ಹಾಗೂ ಅಗತ್ಯ ಮಾಹಿತಿಗಳು ಸಾರ್ವಜನಿಕರಿಗೆ ಸುಲಭವಾಗಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಮುಂದಿನ 25 ವರ್ಷಗಳ ನಗರದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೀರು ಸಂಗ್ರಹಣಾ ಘಟಕಗಳನ್ನು ಮೇಲ್ದರ್ಜೆಗೇರಿಸುವಂತೆ ನಿರ್ದೇಶನ ನೀಡಿದರು.

ಮಂಗಳೂರಿನಲ್ಲಿ ಒಟ್ಟು 96,300 ಮನೆಗಳ ನಳ್ಳಿ ಸಂಪರ್ಕಗಳ ಪೈಕಿ 39,182 ಸಂಪರ್ಕಗಳು ಪೂರ್ಣಗೊಂಡಿದ್ದು, ಬಾಕಿ ಇರುವ 57,118 ಸಂಪರ್ಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಪ್ರಸ್ತುತ ನಗರದ ಶೇ.65ರಷ್ಟು ಅಂದರೆ 86.09 ಚದರ ಕಿ.ಮೀ. ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಲಭ್ಯವಿದ್ದು, ಉಳಿದ ಪ್ರದೇಶಗಳಿಗೂ ಒಳಚರಂಡಿ ವ್ಯವಸ್ಥೆಯನ್ನು ಹಂತ ಹಂತವಾಗಿ ವಿಸ್ತರಿಸಲು ಸೂಚಿಸಿದರು.

ಬೀದಿ ದೀಪ, ಮಾರುಕಟ್ಟೆ ಕಾಮಗಾರಿಗೆ ವೇಗ:

ನಗರದಲ್ಲಿ ಈಗಾಗಲೇ ಶೇ.55.6ರಷ್ಟು, ಅಂದರೆ 36,643 ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಉಳಿದ ಪ್ರದೇಶಗಳಲ್ಲಿಯೂ ಬೀದಿ ದೀಪಗಳನ್ನು ಶೀಘ್ರವಾಗಿ ಅಳವಡಿಸಬೇಕು. ಕೇಂದ್ರ ಮಾರುಕಟ್ಟೆ ಸೇರಿದಂತೆ ಕಂಕನಾಡಿ, ಕದ್ರಿ, ಉರ್ವ ಹಾಗೂ ಸುರತ್ಕಲ್ ಮಾರುಕಟ್ಟೆಗಳ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲಿಸಿದ ಯತೀಂದ್ರ ಸಿದ್ದರಾಮಯ್ಯ, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ಬಾಕ್ಸ್

ತ್ಯಾಜ್ಯ ವಿಂಗಡಣೆಗೆ ಕಟ್ಟುನಿಟ್ಟಿನ ಸೂಚನೆ

ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಸುಮಾರು 120 ಟನ್ ಹಸಿಕಸ, 125 ಟನ್ ಮಿಶ್ರಿತ ಕಸ, 15 ಟನ್ ಎಳನೀರು/ ತೆಂಗಿನಕಾಯಿ ತ್ಯಾಜ್ಯ ಹಾಗೂ 5 ಟನ್ ಸ್ಯಾನಿಟರಿ ತ್ಯಾಜ್ಯ, ಜತೆಗೆ ವಾರಕ್ಕೆ ಉತ್ಪತ್ತಿಯಾಗುವ ಸುಮಾರು 250 ಟನ್ ಒಣಕಸವನ್ನು ಶೇ.100ರಷ್ಟು ಮೂಲದಲ್ಲಿಯೇ ವಿಂಗಡಿಸುವಂತೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ತ್ಯಾಜ್ಯ ವಿಂಗಡಣೆ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು.

ಇ-ಖಾತಾ ವಿತರಣೆ ಚುರುಕುಗೊಳಿಸಲು ಸೂಚನೆ:

ಮಂಗಳೂರು ನಗರದಲ್ಲಿ ಒಟ್ಟು 2,22,256 ಇ-ಖಾತಾಗಳ ಪೈಕಿ 68,603 ಇ-ಖಾತಾಗಳನ್ನು ವಿತರಿಸಲಾಗಿದ್ದು, ಬಾಕಿ ಇರುವ ಇ-ಖಾತಾಗಳ ವಿತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದರು.

ಸಭೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಡಾ. ಭರತ್ ಶೆಟ್ಟಿ ವೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮೋಹನ್ ಪಿ.ವಿ., ಕಿಶೋರ್ ಕುಮಾರ್ ಪುತ್ತೂರು, ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೊಹಮ್ಮದ್ ನಝೀರ್ ಇದ್ದರು.

LEAVE A REPLY

Please enter your comment!
Please enter your name here