


ಮಂಗಳೂರು: ಐಟಿ ಬಿಟಿ ಕ್ಷೇತ್ರಕ್ಕೆ ಮಂಗಳೂರು- ಉಡುಪಿ ಭಾಗ ಅತ್ಯಂತ ಪ್ರಸಕ್ತವಾಗಿದ್ದು, ಇಲ್ಲಿ ಸ್ಮಾರ್ಟ್, ಪರಿಸರ ಸ್ನೇಹಿ ಹಾಗೂ ಜಲಕ್ರೀಡೆಗಳಿಗಳಿಗೆ ಪೂರಕವಾದ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಾಗಿದೆ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಮತ್ತು ಬೆಂಗಳೂರು ಬಿಸ್ನೆಸ್ ಕಾರಿಡಾರ್ ಅಧ್ಯಕ್ಷ ಎಲ್.ಕೆ. ಅತೀಕ್ ಅಭಿಪ್ರಾಯಪಟ್ಟಿದ್ದಾರೆ.





ನಗರದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಬುಧವಾರ ‘ಮಂಗಳೂರು ಟೆಕ್ನೋವಾಂಜಾ-2026’ ಆರನೇ ಆವೃತ್ತಿಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.


ಕರಾವಳಿಯಲ್ಲಿ ಐಟಿ ಬಿಟಿ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೂಡಿಕೆ ಅರ್ಥಪೂರ್ಣವಾಗಿದ್ದು, ಈ ಬಗ್ಗೆ ಹೂಡಿಕೆದಾರರಿಗೆ ಮನದಟ್ಟು ಮಾಡುವ ಕಾರ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಬೀಚ್ ಪ್ರವಾಸೋದ್ಯಮವನ್ನು ಒಳಗೊಂಡು ಐಟಿ- ಬಿಟಿ ಕ್ಷೇತ್ರಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ರಾಜ್ಯ ಸರ್ಕಾರ ಕಲ್ಪಿಸಲು ಮುಂದಾಗಿದೆ ಎಂದರು.
ರಾಜ್ಯದಲ್ಲಿ ಉದ್ಯಮ ಮತ್ತು ಶಿಕ್ಷಣ ಸಹಯೋಗವನ್ನು ಆಳವಾಗಿ ಬೆಳೆಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು)ನ ಪಠ್ಯಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದೆ. ಆ ಪಠ್ಯ ಕ್ರಮವು ಹಳೆಯದಾಗಿದ್ದು, ಶಿಕ್ಷಣ ಪೂರೈಸಿ ಉದ್ಯಮಕ್ಕೆ ಸಿದ್ಧರಾದ ಪದವೀಧರರನ್ನು ಅಲ್ಲಿ ಉತ್ಪಾದಿಸುತ್ತಿರುವುದು ಕಂಡು ಬಂದಿಲ್ಲ ಎಂಬುದು ಹೆಚ್ಚಿನ ಸಮೀಕ್ಷೆಗಳಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಉದ್ಯಮ ಸಿದ್ಧ ಪದವೀಧರನ್ನು ರೂಪಿಸಲು ಕೋರ್ಸ್ಗಳ ಅಗತ್ಯವಿದ್ದು, ರಾಜ್ಯ ಸರ್ಕಾರ ಎಐ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮುಂದಾಗಿದೆ ಎಂದು ಎಲ್.ಕೆ. ಅತೀಕ್ ಹೇಳಿದರು.
ಉದ್ಘಾಟನಾ ಸಮಾರಂಭದ ವೇಳೆ ಅಸೆಂಚರ್ ಇಂಡಿಯಾದ ದೇಶೀಯ ಆಡಳಿತ ನಿರ್ದೇಶಕ ಅಜಯ್ ವಿಜಿ ಹಾಗೂ ಟೆಕ್ ಮಹೀಂದ್ರಾದ ಮುಖ್ಯ ಅಧಿಕಾರಿ ರಿಚ್ಚರ್ಡ್ ಲೋಬೊ ಅವರ ಜತೆ ಕೆಡಿಇಎಂನ ಸಿಇಒ ಸಂಜೀವ್ ಕುಮಾರ್ ಗುಪ್ತಾ ಸಂವಾದ ನಿರ್ವಹಿಸಿದರು.








