ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಏರಿಕೆಗೆ ಎಂ.ಆರ್. ಪೂವಮ್ಮ ಆಗ್ರಹ – ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಮಂಗಳೂರಿಗೆ ಆಗಮಿಸಿದ ಪೂವಮ್ಮ – ಬೇರೆ ರಾಜ್ಯಗಳಲ್ಲಿ 3-4 ಕೋಟಿ ರು. ಪ್ರೋತ್ಸಾಹಧನ, ನಮ್ಮ ರಾಜ್ಯದಲ್ಲಿ ಕೇವಲ 35 ಲಕ್ಷ ರು.: ಪೂವಮ್ಮ ಖೇದ  – ಚಿನ್ನ ಗೆದ್ದರೂ ತಕ್ಷಣ ಕರೆ ಮಾಡಿ ಅಭಿನಂದಿಸದ ರಾಜ್ಯ ಸರ್ಕಾರ: ಬೇಸರ ವ್ಯಕ್ತಪಡಿಸಿದ ಪೂವಮ್ಮ

ಮಂಗಳೂರು: ಅಂತಾರಾಷ್ಟ್ರೀಯ, ವಿಶ್ವ ಮಟ್ಟದಲ್ಲಿ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನ ತೀರ ಕಡಿಮೆ ಇದ್ದು, ಉಳಿದ ರಾಜ್ಯಗಳ ಮಾದರಿಯಲ್ಲಿ ತಕ್ಷಣ ಹೆಚ್ಚಿಸಬೇಕು ಎಂದು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮ ಆಗ್ರಹಿಸಿದ್ದಾರೆ.

ಏಷ್ಯನ್ ಗೇಮ್ಸ್ ನ 400 ಮೀ. ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಮಂಗಳೂರಿಗೆ ಆಗಮಿಸಿದ ಅವರು, ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹರಿಯಾಣ, ಪಂಜಾಬ್ ಹಾಗೂ ಕೇರಳದಂತಹ ರಾಜ್ಯಗಳಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಿಗೆ 3ರಿಂದ 4 ಕೋಟಿ ರು. ನಗದು ಬಹುಮಾನ ಹಾಗೂ ಡಿವೈಎಸ್‌ಪಿ ಶ್ರೇಣಿಯ ಉನ್ನತ ಸರ್ಕಾರಿ ಉದ್ಯೋಗ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಚಿನ್ನದ ಪದಕಕ್ಕೆ ನೀಡುತ್ತಿರುವ ಮೊತ್ತ ಕೇವಲ 35 ಲಕ್ಷ ರು. ಮಾತ್ರ. ಈ ತಾರತಮ್ಯವನ್ನು ಸರಿಪಡಿಸಿ ಕರ್ನಾಟಕದ ಕ್ರೀಡಾಪಟುಗಳಿಗೆ ಅರ್ಹ ಗೌರವ ಮತ್ತು ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಗೆಲುವಿನ ಕ್ಷಣದಲ್ಲಿ ಸಿಗದ ಗೌರವ- ಅಭಿನಂದನೆ:

ಇತರ ರಾಜ್ಯಗಳ ಅಥ್ಲೀಟ್‌ಗಳು ಪದಕ ಗೆದ್ದ ತಕ್ಷಣ ಅವರ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರು ಕರೆ ಮಾಡಿ ಅಭಿನಂದಿಸುತ್ತಿದ್ದರು. ಆದರೆ ಕಳೆದ 23 ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸಿ ದೇಶಕ್ಕೆ ಹಿರಿಮೆ ತಂದರೂ, ಈಗ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದರೂ ಆ ಕ್ಷಣದಲ್ಲಿ ರಾಜ್ಯ ಸರ್ಕಾರದಿಂದ ಒಂದೂ ಅಭಿನಂದನೆಯ ಕರೆ ಬರಲಿಲ್ಲ. ಇತರ ರಾಜ್ಯದ ಕ್ರೀಡಾಪಟುಗಳು ‘ನಿಮ್ಮ ರಾಜ್ಯದಿಂದ ಯಾರು ಕರೆ ಮಾಡಿದರು?’ ಎಂದು ಕೇಳಿದಾಗ ಉತ್ತರಿಸಲಾಗದೆ ತೀವ್ರ ನಿರಾಶೆಯಾಯಿತು. ಭಾರತಕ್ಕೆ ಮರಳಿದ ಮೇಲಷ್ಟೇ ನಿನ್ನೆ ಸಿಎಂ ಡಿಕೆ ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಅನೇಕರು ಕರೆ ಮಾಡಿ ಮಾತನಾಡಿದರು ಎಂದು ಎಂ.ಆರ್.ಪೂವಮ್ಮ ತಮ್ಮ ನೋವು ತೋಡಿಕೊಂಡರು.

ಚಿನ್ನ ಗೆಲ್ಲಲೇಬೇಕು ಅಂತ ದೃಢ ನಿರ್ಧಾರ ಮಾಡಿದ್ದೆವು:

ಪಂದ್ಯದ ಅನುಭವ ಹಂಚಿಕೊಂಡ ಪೂವಮ್ಮ, ಕಳೆದ ಏಷ್ಯನ್ ಗೇಮ್ಸ್‌ನಲ್ಲಿ ನಮಗೆ ಬೆಳ್ಳಿ ಪದಕ ಸಿಕ್ಕಿತ್ತು. ಹೀಗಾಗಿ ಈ ಬಾರಿ ‘ಮಾಡು ಇಲ್ಲವೇ ಮಡಿ’ ತಂತ್ರದೊಂದಿಗೆ ಕಣಕ್ಕಿಳಿದು ಚಿನ್ನ ಗೆಲ್ಲಲೇಬೇಕೆಂಬ ದೃಢ ನಿರ್ಧಾರ ಮಾಡಿದ್ದೆವು. ಬಹ್ರೇನ್ ಹಾಗೂ ಚೀನಾ ತಂಡಗಳ ತೀವ್ರ ಪೈಪೋಟಿಯ ನಡುವೆಯೂ ಉತ್ತಮ ಮುನ್ನಡೆ ಒದಗಿಸುವಲ್ಲಿ ಯಶಸ್ವಿಯಾದೆವು. ಅಥ್ಲೆಟಿಕ್ ಮೈದಾನದಲ್ಲಿ ರಾಷ್ಟ್ರಗೀತೆ ಮೊಳಗಿದ ಕ್ಷಣ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.

2002ರಲ್ಲಿ ಬಜ್ಪೆಯಲ್ಲಿ ತಮ್ಮ ಕ್ರೀಡಾ ಪಯಣ ಆರಂಭಿಸಿ ನಂತರ ಮಂಗಳೂರಿಗೆ ಸ್ಥಳಾಂತರಗೊಂಡ ಹಂತವನ್ನು, ಇಲ್ಲಿಂದ ಕ್ರೀಡೆಗೆ ಪ್ರೋತ್ಸಾಹ ದೊರಕಿದ್ದನ್ನು ಸ್ಮರಿಸಿದ ಅವರು, ಜ್ಯೂನಿಯರ್ ನ್ಯಾಷನಲ್ ರೆಕಾರ್ಡ್ ಮುರಿದು 2008ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದನ್ನು ನೆನಪಿಸಿಕೊಂಡರು. ತಮ್ಮ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ ತರಬೇತುದಾರರಾದ ವಸಂತ್, ದಿನೇಶ್ ಕುಂದರ್ ಹಾಗೂ ಸದಾ ಬೆನ್ನೆಲುಬಾಗಿ ನಿಂತ ಕುಟುಂಬದ ಬೆಂಬಲವೇ ಈ ಸುದೀರ್ಘ ಸಾಧನೆಗೆ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪೂವಮ್ಮ ಅವರ ತರಬೇತುದಾರ ದಿನೇಶ್ ಕುಂದರ್, ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಮೂಡ ಮಾಜಿ ಅಧ್ಯಕ್ಷ ತೇಜೋಮಯ ಮತ್ತಿತರರಿದ್ದರು.

————

ಪ್ರೋತ್ಸಾಹಧನ ಏರಿಕೆ ಮಾಡಲು ಸರ್ಕಾರಕ್ಕೆ ಮನವರಿಕೆ: ಐವನ್ ಡಿಸೋಜ

ಸುದ್ದಿಗೋಷ್ಠಿಯಲ್ಲಿ ಪೂವಮ್ಮ ಅವರ ಬೇಸರಕ್ಕೆ ಅದೇ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಇತರ ರಾಜ್ಯಗಳಲ್ಲಿ ನೀಡುತ್ತಿರುವ ಮಾದರಿಯಲ್ಲೇ ಸಮಾನ ಪ್ರಮಾಣದ ಪ್ರೋತ್ಸಾಹಧನ, ಸರ್ಕಾರಿ ಉದ್ಯೋಗ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಆಡಳಿತಾರೂಢ ಪಕ್ಷದ ಪರವಾಗಿ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಪೂವಮ್ಮ ಅವರ ತಾಯಿ ಅವರ ವೀಡಿಯೊ ಹೇಳಿಕೆಯನ್ನು ನಾನು ಗಮನಿಸಿದ ತಕ್ಷಣ ಕ್ರೀಡಾ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ವೀಡಿಯೊವನ್ನು ಅವರಿಗೆ ಫಾರ್ವರ್ಡ್ ಮಾಡಲಾಗಿದೆ. ಇತರ ರಾಜ್ಯಗಳು ನೀಡುವಷ್ಟೇ ಸಮಾನ ಮೊತ್ತದ ನಗದು ಬಹುಮಾನವನ್ನು ನಮ್ಮ ರಾಜ್ಯದ ಕ್ರೀಡಾಪಟುಗಳಿಗೂ ಒದಗಿಸಲು ಕ್ರೀಡಾ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here