ಕೊರಿಯರ್ ಮೂಲಕ ಬರೋಬ್ಬರಿ 1.58 ಕೋಟಿ ರು. ಎಂಡಿಎಂಎ ಸಾಗಾಟ ಜಾಲ ಪತ್ತೆ! – ಮೂವರು ಆರೋಪಿಗಳ ಬಂಧನ, 1 ಕೆಜಿ 796.96 ಗ್ರಾಂ ಎಂಡಿಎಂಎ ವಶ

ಕೊರಿಯರ್ ಮೂಲಕ ಬರೋಬ್ಬರಿ 1.58 ಕೋಟಿ ರು. ಎಂಡಿಎಂಎ ಸಾಗಾಟ ಜಾಲ ಪತ್ತೆ!

– ಮೂವರು ಆರೋಪಿಗಳ ಬಂಧನ, 1 ಕೆಜಿ 796.96 ಗ್ರಾಂ ಎಂಡಿಎಂಎ ವಶ

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಕೊರಿಯರ್ ಮೂಲಕ ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ₹ 1.58 ಕೋಟಿ ರು. ಮೌಲ್ಯದ 1 ಕೆಜಿ 796.96 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಮಂಗಲ್ಪಾಡಿಯ ಅಬ್ದುಲ್ ಹಾಪೀಲ್ (25), ಮಂಗಳೂರಿನ ಕೂಳೂರು ಕಸಬಾ ಬೆಂದ್ರೆಯ ಜಿಯಾವುಲ್ ಹಕ್ (30), ಪಾಂಡೇಶ್ವರ ಓಲ್ಡ್ ಕೆಂಟ್ ರೋಡ್ ನಿವಾಸಿ, ಮೂಲತಃ ಜಲ್ಲಿಗುಡ್ಡೆಯ ಅಲ್ತಾಫ್ (28) ಬಂಧಿತರು.

ನಗರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಅ.8ರಂದು ರಾತ್ರಿ 10 ಗಂಟೆಗೆ ಉಳ್ಳಾಲ ತಾಲೂಕು ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 1 ಕೆಜಿ 796.96 ಗ್ರಾಂ ಎಂಡಿಎಂಎ, 3 ಮೊಬೈಲ್ ಫೋನ್, ಮಾದಕ ವಸ್ತು ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಆಟೋ ರಿಕ್ಷಾ, ಕೊರಿಯರ್ ರಟ್ಟಿನ ಬಾಕ್ಸ್, ವಾಟರ್ ಪ್ಯೂರಿಪಾಯರ್ ವಶಪಡಿಸಿಕೊಳ್ಳಲಾಗಿದೆ. ಸೊತ್ತುಗಳ ಒಟ್ಟು ಮೌಲ್ಯ 1,63,84,000 ರು. ಆಗಿರುತ್ತದೆ. ಈ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಖರೀದಿಸಿ, ಅದನ್ನು ವಾಟರ್ ಪ್ಯೂರಿಫೈಯರ್ ನ ನೀರು ಸಂಗ್ರಹವಾಗುವ ಸ್ಥಳದಲ್ಲಿ ಒಳಗೆ ಇರಿಸಿ, ಬಳಿಕ ಕೊರಿಯರ್ ಮೂಲಕ ಮಂಗಳೂರಿಗೆ ಕಳುಹಿಸಿದ್ದರು. ನಂತರ ಈ ಮಾದಕ ವಸ್ತುವನ್ನು ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here