ಪುತ್ರಿಯಿಂದಲೇ ತಂದೆ ಕೊಲೆ ಶಂಕೆ: ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ – ಮೃತನ ಸ್ನೇಹಿತನಿಂದ ದೂರು, ಆಸ್ತಿಗಾಗಿ ಕೊಲೆ ಆರೋಪ

ಮಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಕೊಟ್ಟಾರ ನಿವಾಸಿ ಅಲ್ಬರ್ಟ್ ರೇಗೋ (86) ಅವರ ಮೃತದೇಹವನ್ನು ಶುಕ್ರವಾರ ದೇರೆಬೈಲ್ ಚರ್ಚ್‌ ಸ್ಮಶಾನದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಕಳೆದ ಜುಲೈ 19ರಂದು ಮೃತಪಟ್ಟಿದ್ದ ಅಲ್ಬರ್ಟ್ ರೇಗೋ ಅವರ ಸಾವಿನ ಕುರಿತು ಅವರ ಸ್ನೇಹಿತ ಹೆರಾಲ್ಡ್ ಎಂಬುವವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಬರ್ಟ್ ಅವರ ಪುತ್ರಿಯೇ ಆಸ್ತಿಗಾಗಿ ಈ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯ ಹಾಗೂ ತಹಸೀಲ್ದಾರ್ ಅನುಮತಿಯೊಂದಿಗೆ ಶವವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆಲ್ಬರ್ಟ್ ರೇಗೋ ಅವರು ತಮ್ಮ ಜೀವಿತಾವಧಿಯಲ್ಲಿ ಅಪಾರ ಆಸ್ತಿ ಸಂಪಾದಿಸಿದ್ದು, ಅವರ ಪುತ್ರಿ ಮಾಯಾ ರೇಗೋ ಹಲವು ವರ್ಷಗಳಿಂದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ತಂದೆಗೆ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಆಕೆಗೆ ಯಾವುದೇ ಆಸ್ತಿ ಬರೆದುಕೊಡಲು ಆಲ್ಬರ್ಟ್ ಅವರಿಗೆ ಇಷ್ಟವಿರಲಿಲ್ಲ. ಆದರೆ ಒತ್ತಾಯ ಮತ್ತು ಬೆದರಿಕೆಯಿಂದ ವಿಲ್ ಬರೆಸಿಕೊಂಡಿದ್ದರು. ಜುಲೈ 19ರಂದು ತಂದೆಯ ಸಾವಿನ ವಿಷಯವನ್ನು ಸಂಬಂಧಿಕರಿಗೆ ತಿಳಿಸದೆ ತರಾತುರಿಯಲ್ಲಿ ದೇರೆಬೈಲ್ ಚರ್ಚ್ ಸ್ಮಶಾನಕ್ಕೆ ಕೊಂಡೊಯ್ದು ದಫನ ಮಾಡಿದ್ದರು. ಆಕೆಯೇ ತಂದೆಗೆ ಮಾನಸಿಕ-ದೈಹಿಕ ಹಲ್ಲೆ ನಡೆಸಿ ಅಥವಾ ಯಾವುದೋ ವಿಷಕಾರಿ ಪದಾರ್ಥ/ ನಿದ್ದೆ ಮಾತ್ರೆ ನೀಡಿ ಕೊಲೆ ಮಾಡಿರುವ ಬಲವಾದ ಸಂಶಯವಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here