ಅ.20ರಂದು ಮಂಗಳೂರಲ್ಲಿ 11ನೇ ವರ್ಷದ ಪಿಲಿನಲಿಕೆ ವೈಭವ – 9 ಆಹ್ವಾನಿತ ತಂಡಗಳು, ಪ್ರಥಮ ಬಹುಮಾನ 10 ಲಕ್ಷ ರು: ಮಿಥುನ್ ರೈ – ಪಿಲಿನಲಿಕೆಗೆ ಚಲನಚಿತ್ರ, ಕ್ರಿಕೆಟ್ ತಾರೆಯರ ದಂಡು

ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನ ಅಧ್ಯಕ್ಷ ಮಿಥುನ್ ರೈ ಸಾರಥ್ಯದಲ್ಲಿ, ನಮ್ಮ ಟಿವಿ ಸಹಯೋಗದಲ್ಲಿ ‘ಪಿಲಿ ನಲಿಕೆ -11’ ಅದ್ಧೂರಿ ಹುಲಿವೇಷ ಸ್ಪರ್ಧೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಅ.20ರಂದು ಬೆಳಗ್ಗೆ 10ರಿಂದ ನಡೆಯಲಿದೆ.

ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಹುಲಿವೇಷ ಕುಣಿತದ ಮೂಲ ಸ್ವರೂಪವನ್ನು ಉಳಿಸುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಪಿಲಿನಲಿಕೆ ಆಯೋಜಿಸಲಾಗುತ್ತಿದೆ. ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಪಿಲಿನಲಿಕೆ ಉದ್ಘಾಟಿಸುವರು. ಈ ಬಾರಿಯೂ ರಾಜಕೀಯ ನಾಯಕರು, ಬಾಲಿವುಡ್, ಸ್ಯಾಂಡಲ್ ವುಡ್, ಕೋಸ್ಟಲ್ ವುಡ್ ತಾರೆಯರು, ಕ್ರಿಕೆಟ್ ಕ್ಷೇತ್ರದ ದಿಗ್ಗಜರು ಪಿಲಿನಲಿಕೆಗೆ ಆಗಮಿಸಿ ತಾರಾ ಮೆರುಗು ನೀಡಲಿದ್ದಾರೆ ಎಂದು ಮಿಥುನ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಹ್ವಾನಿತ 9 ತಂಡಗಳು:

ಪಿಲಿನಲಿಕೆ-11 ಸ್ಪರ್ಧಾಕಣದಲ್ಲಿ ಆಹ್ವಾನಿತ 9 ತಂಡಗಳು ಭಾಗವಹಿಸಲಿವೆ. ವಿಜೇತರಿಗೆ ಪ್ರಥಮ 10 ಲಕ್ಷ ರು., ದ್ವಿತೀಯ 5 ಲಕ್ಷ ರು., ತೃತೀಯ 3 ಲಕ್ಷ ರು. ಮತ್ತು ಫಲಕ, ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವುದು, ತಾಸೆ, ಬಣ್ಣಗಾರಿಕೆ, ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ 50 ಸಾವಿರ ರು. ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ತಂಡಗಳಿಗೆ ತಲಾ 50 ಸಾವಿರ ರು. ಪ್ರೋತ್ಸಾಹಧನ ನೀಡಲಾಗುತ್ತಿದೆ. 30 ಸಾವಿರ ಪ್ರೇಕ್ಷಕರಿಗೆ ಪಿಲಿನಲಿಕೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗುವುದು ಎಂದು ವಿವರ ನೀಡಿದರು.

ತಾರೆಯರ ದಂಡು:

ಈ ಬಾರಿಯ ಪಿಲಿನಲಿಕೆಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಬಾಕ್ಸರ್ ವಿಜೇಂದರ್ ಸಿಂಗ್, ನಟರಾದ ಸುನೀಲ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಉನ್ನಿ ಮುಕುಂದನ್, ತುಳು ಚಿತ್ರನಟರು, ದ.ಕ. ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಆಹ್ವಾನ ನೀಡಲಾಗಿದ್ದು, ಸಿಎಂ ಆಗಮಿಸುವ ವಿಶ್ವಾಸವಿದೆ ಎಂದು ಮಿಥುನ್ ರೈ ಹೇಳಿದರು.

ಪ್ರಮುಖರಾದ ಡಾ. ಶಿವಶರಣ್ ಶೆಟ್ಟಿ, ಅವಿನಾಶ್ ಸುವರ್ಣ, ವಿಕಾಸ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್, ಆನಂದ್ ಶೆಟ್ಟಿ ಇದ್ದರು.

ಹುಲಿ ತಂಡಗಳಿಗೆ ವಾರ್ಷಿಕ 2 ಲಕ್ಷ ಪ್ರೋತ್ಸಾಹಧನ ಶೀಘ್ರ: ಮಿಥುನ್ ರೈ

ಮಂಗಳೂರು: ಹುಲಿವೇಷ ಸಂಪ್ರದಾಯ ಉಳಿಸಿಕೊಂಡು ಬಂದಿರುವ ಕಲಾವಿದರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹುಲಿವೇಷ ತಂಡಗಳಿಗೆ ರಾಜ್ಯ ಸರ್ಕಾರ ವಾರ್ಷಿಕ 2 ಲಕ್ಷ ರು. ಅನುದಾನವನ್ನು ಘೋಷಿಸಬೇಕು ಎಂದು ಈಗಾಗಲೇ ಮನವಿ ಮಾಡಲಾಗಿದ್ದು, ಅದಕ್ಕೆ ಸಿಎಂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಶೀಘ್ರ ಈ ಕುರಿತು ಆದೇಶ ಮಾಡುವ ನಿರೀಕ್ಷೆಯಿದೆ ಎಂದು ಪಿಲಿನಲಿಕೆ ಪ್ರತಿಷ್ಠಾನ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 150 ನೋಂದಾಯಿತ ತಂಡಗಳಿವೆ. ಅನುದಾನ ಪಡೆಯಲು ಹುಲಿವೇಷ ತಂಡಗಳಿಗೆ ಕೆಲವು ಮಾನದಂಡಗಳನ್ನು ಇರಿಸಲಾಗಿದೆ ಎಂದರು.

ಮರಿ ಹುಲಿ ದಿನದ ಸಂಭಾವನೆ 1.25 ಲಕ್ಷ!:

ಹುಲಿವೇಷ ತಂಡಗಳಲ್ಲಿ ಮರಿ ಹುಲಿ ಪ್ರದರ್ಶನ ನೀಡುವ ಕಲಾವಿದರಿಗೆ ಹೆಚ್ಚಿನ ಬೇಡಿಕೆಯಿದೆ. ಮಂಗಳೂರಿನ ಒಬ್ಬ ‘ಮರಿ ಹುಲಿ’ ಕಲಾವಿದ ದಿನಕ್ಕೆ 1.25 ಲಕ್ಷ ರು. ಸಂಭಾವನೆ ಪಡೆಯುತ್ತಾನೆ. ಅದೇ ರೀತಿ, ಹಿಂದೆ ದಿನಕ್ಕೆ 10 ಸಾವಿರ ರು. ಸಂಭಾವನೆ ಪಡೆಯುತ್ತಿದ್ದ ತಾಸೆ ವಾದನ ತಂಡಗಳು ಈಗ 75 ಸಾವಿರ ರು.ಗಳಷ್ಟು ಪಡೆಯುತ್ತಿವೆ. ‘ಪಿಲಿನಲಿಕೆ’ಯಲ್ಲಿ ಭಾಗವಹಿಸುವ ಒಂದು ಹುಲಿವೇಷ ತಂಡವು 50 ಸ್ಯಾಕ್ಸೋಫೋನ್‌ಗಳೊಂದಿಗೆ ಆಗಮಿಸಲಿದೆ ಎಂದು ಮಿಥುನ್ ರೈ ಅವರು ಹುಲಿವೇಷದ ಬದಲಾದ ಸನ್ನಿವೇಶಗಳನ್ನು ವಿವರಿಸಿದರು.

LEAVE A REPLY

Please enter your comment!
Please enter your name here