


ಮಂಗಳೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೂರ್ವ ಮತ್ತು ಸುರತ್ಕಲ್ ಠಾಣೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.





ಕಾಸರಗೋಡು ವರ್ಕಾಡಿಯ ಮಹಮ್ಮದ್ ಇರ್ಷಾದ್ (20), ಕೇರಳ ಕಣ್ಣೂರಿನ ನಿತಿನ್ ಕೃಷ್ಣನ್ (27) ಬಂಧಿತರು.
ಪಂಪ್ವೆಲ್ನಿಂದ ನಂತೂರು ಕಡೆಗೆ ತೆರಳುವ ಸರ್ವಿಸ್ ರಸ್ತೆಯ ಬದಿಯಲ್ಲಿ ಆಟೋರಿಕ್ಷಾದಲ್ಲಿ ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದಾಗ ಮಹಮ್ಮದ್ ಇರ್ಷಾದ್ ನನ್ನು ಮಂಗಳೂರು ಪೂರ್ವ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಈತನಿಂದ ₹1.36 ಲಕ್ಷ ಮೌಲ್ಯದ 13.69 ಗ್ರಾಂ ಎಂಡಿಎಂಎ, ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಆಟೋರಿಕ್ಷಾ (ಒಟ್ಟು ಮೌಲ್ಯ ₹2,94,500) ವಶಪಡಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ನಿತಿನ್ ಕೃಷ್ಣನ್ ನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.₹60,000 ಮೌಲ್ಯದ 1.206 ಕೆ.ಜಿ. ಗಾಂಜಾ, ಕೆಟಿಎಂ ಬೈಕ್ ಹಾಗೂ ಮೊಬೈಲ್ ಫೋನ್ ವಶಪಡಿಸಿದ್ದಾರೆ. ಈತ ಕದ್ರಿ ಗ್ರಾಮದ ಪದವು ಮೈದಾನ ಬಳಿಯ ಆಯುರ್ವೇದ ಕ್ಲಿನಿಕ್ ನಲ್ಲಿ ಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.










