


ಮಂಗಳೂರು: ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಣಂಬೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಪಲ್ಟಿಯಾಗಿದ್ದು, ಓರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ. ಬಸ್‌ನಲ್ಲಿದ್ದ ಇತರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.







ಬೆಳ್ಮಣ್ ನಿವಾಸಿ ಆದಿತ್ಯ ಗಾಯಗೊಂಡವರು. ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಒದಗಿಸಲಾಗಿದೆ.
ಪಣಂಬೂರಿನ ಎಂಸಿಎಫ್ ರೈಲ್ವೆ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ 8.15ಕ್ಕೆ ಈ ಘಟನೆ ಸಂಭವಿಸಿದೆ.
ಕಾರ್ಕಳದಿಂದ ಹೊರಟಿದ್ದ ವಿಶಾಲ್ ಮೋಟರ್ಸ್ ಹೆಸರಿನ ಬಸ್ ಪಣಂಬೂರಿನ ಎಂಸಿಎಫ್ ರೈಲ್ವೆ ಗೇಟ್ ಹತ್ತಿರ ಬರುವಾಗ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಬಸ್ ಹತೋಟಿ ತಪ್ಪಿ ಪಲ್ಟಿಯಾಗಿದೆ.
ಮಂಗಳೂರು ಉತ್ತರ ಸಂಚಾರ ಠಾಣೆ ಪೊಲೀಸರು ಹಾಗೂ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಬಸ್‌ನಿಂದ ಹೊರತೆಗೆದು ರಕ್ಷಿಸಿದ್ದಾರೆ.
ಘಟನೆಯಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು.
ಫೋಟೊ ಇದೆ








