ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ: 21 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ – ಶಿಕ್ಷಕರು ಆಧುನಿಕ ತಂತ್ರಜ್ಞಾನ, ‘ಎಐ’ಗೆ ತಕ್ಕಂತೆ ಅಪ್‌ಡೇಟ್ ಆಗುವುದು ಅಗತ್ಯ: ಸಚಿವ ಯು.ಟಿ. ಖಾದರ್

ಮಂಗಳೂರು: ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಗೂಗಲ್ ಹಾಗೂ ಹೊಸ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಇಂಥ ಕಾಲಘಟ್ಟದಲ್ಲಿ ಶಿಕ್ಷಕರು ಕೃತಕ ಬುದ್ಧಿಮತ್ತೆ (ಎಐ) ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ನಿರಂತರವಾಗಿ ತಮ್ಮ ಜ್ಞಾನವನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಲಹೆ ನೀಡಿದ್ದಾರೆ.

ದ.ಕ. ಜಿಲ್ಲಾಡಳಿತ, ಜಿಪಂ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ಉತ್ತರ ವಲಯ ಸಹಯೋಗದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ- ತಾಯಿಯ ನಂತರ ವ್ಯಕ್ತಿಯೊಬ್ಬ ಉನ್ನತ ಸ್ಥಾನಕ್ಕೇರಲು ಶಿಕ್ಷಕರೇ ಕಾರಣ. ದೇಶದ ಭವಿಷ್ಯದ ಉತ್ತಮ ಪ್ರಜೆಗಳನ್ನು ಮತ್ತು ನಾಯಕರನ್ನು ರೂಪಿಸುವ ದೊಡ್ಡ ಶಕ್ತಿ ಶಿಕ್ಷಕ ಸಮುದಾಯಕ್ಕಿದೆ. ವಿದ್ಯಾರ್ಥಿಗಳು ಕೇವಲ ‘ಕ್ಲಾಸ್ ಸ್ಮಾರ್ಟ್’ ಆದರೆ ಸಾಲದು, ಸಮಾಜವನ್ನು ಎದುರಿಸುವ ‘ಸ್ಟ್ರೀಟ್ ಸ್ಮಾರ್ಟ್’ ಕೂಡ ಆಗಬೇಕು. ಇಂದು ಹೆಚ್ಚು ಶಿಕ್ಷಣ ಪಡೆದವರಲ್ಲೇ ಭ್ರಷ್ಟಾಚಾರ, ಕೋಮುವಾದ ಹಾಗೂ ಸಮಾಜಘಾತಕ ಚಿಂತನೆಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. ಹೀಗಾಗಿ ಅಂಕ ಗಳಿಕೆಯ ಜತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಯು.ಟಿ. ಖಾದರ್ ಹೇಳಿದರು.

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಬದ್ಧ:

ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದು, ಈಗಾಗಲೇ 15,000 ಹಾಗೂ 1,500 ಸೇರಿ ಒಟ್ಟು ಸುಮಾರು 16,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಮುಖ್ಯಮಂತ್ರಿ ಜತೆ ಚರ್ಚಿಸಿ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಶಿಕ್ಷಕರಿಗೆ ಮಾನಸಿಕ ಒತ್ತಡ ಹೇರಬಾರದು ಎಂದು ಖಾದರ್ ಎಚ್ಚರಿಸಿದರು.

21 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ:

ಸಮಾರಂಭದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗಗಳಲ್ಲಿ ತಲಾ ಏಳು ಮಂದಿಯಂತೆ ಒಟ್ಟು 21 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಶಾಲೆಟ್ ಪಿಂಟೊ, ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪಂಚಾಯ್ತಿ ಸಿಇಒ ವಿನಾಯಕ ಕಾರ್ಭಾರಿ, ಮಂಗಳೂರು ಸಹಾಯಕ ಕಮಿಷನರ್ ಮೀನಾಕ್ಷಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡೆ, ಡಯಟ್ ಉಪನಿರ್ದೇಶಕ ಸದಾನಂದ ಪೂಂಜ, ಶಶಿಧರ್, ಜೇಮ್ಸ್ ಕುಟಿನ್ಹೊ, ರಮೇಶ್ ಬಾಬು, ಮಹೇಶ್ ಕುಮಾರ್ ಹೊಳ್ಳ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು

LEAVE A REPLY

Please enter your comment!
Please enter your name here