ಮಂಗಳೂರು- ಗೋವಾ ನಡುವೆ ಕ್ರೂಸ್ ಸೇವೆ: ಸಚಿವ ಜಾರ್ಜ್ – ಕರಾವಳಿ ಪ್ರವಾಸೋದ್ಯಮಕ್ಕೆ ಬಿಗ್ ಬೂಸ್ಟ್ – ಕ್ರೂಸ್ ಪ್ರವಾಸೋದ್ಯಮ, ಕೇರಳ ಮಾದರಿ ಹೌಸ್ ಬೋಟ್ ಆರಂಭಿಸಲು ಗಂಭೀರ ಚಿಂತನೆ

ಮಂಗಳೂರು: ರಾಜ್ಯದ ಕರಾವಳಿ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕ್ರೂಸ್ ಪ್ರವಾಸೋದ್ಯಮ, ಕೇರಳ ಮಾದರಿಯ ಹೌಸ್‌ಬೋಟ್‌ಗಳು ಮತ್ತು ಮಂಗಳೂರು- ಗೋವಾ ನಡುವೆ ಕ್ರೂಸ್ ಸೇವೆಯನ್ನು ಪರಿಚಯಿಸುವ ಪ್ರಸ್ತಾವನೆಗಳನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ನಗರದ ತಣ್ಣೀರುಭಾವಿ ‘ಬ್ಲೂ ಫ್ಲ್ಯಾಗ್’ ಕಡಲತೀರದಲ್ಲಿ ಭಾನುವಾರ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಜಲ ಪ್ರವಾಸೋದ್ಯಮವು ಪ್ರಮುಖ ಆಕರ್ಷಣೆಯಾಗಲಿದ್ದು, ಅದನ್ನು ಉತ್ತೇಜಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಯೋಜನೆಯ ಭಾಗವಾಗಿ, ಕರಾವಳಿಯ ಉದ್ದಕ್ಕೂ ವಿವಿಧ ತಾಣಗಳಲ್ಲಿ ನಿಲುಗಡೆ ನೀಡುವ ಮೂಲಕ ಮಂಗಳೂರಿನಿಂದ ಗೋವಾಕ್ಕೆ ಕ್ರೂಸ್ ಸೇವೆ ಪ್ರಾರಂಭಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಸ್ಥಳೀಯ ಹಡಗು ನಿರ್ಮಾಣ ಕೇಂದ್ರಗಳಲ್ಲಿ (ಶಿಪ್‌ಯಾರ್ಡ್) ನಿರ್ಮಿಸಲಾಗುವ ಹಡಗುಗಳನ್ನು ಈ ಸೇವೆಗೆ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

ನವ ಮಂಗಳೂರು ಬಂದರಿಗೆ ಆಗಮಿಸುವ ಅಂತಾರಾಷ್ಟ್ರೀಯ ಕ್ರೂಸ್ ಪ್ರವಾಸಿಗರನ್ನು ಈ ಭಾಗದಲ್ಲೇ ತಂಗುವಂತೆ ಮಾಡಿ ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ಆಕರ್ಷಿಸಲು ಸರ್ಕಾರ ಶ್ರಮಿಸುತ್ತಿದೆ. ಅಗತ್ಯ ಮೂಲಸೌಕರ್ಯಗಳ ಕುರಿತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ಎನ್‌ಎಂಪಿಎ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದು ಕೆ.ಜೆ. ಜಾರ್ಜ್ ತಿಳಿಸಿದರು.

ಕೇರಳ ಮಾದರಿಯ ಹೌಸ್‌ಬೋಟ್‌ಗಳನ್ನು ಪರಿಚಯಿಸುವ ಸಾಧ್ಯಾಸಾಧ್ಯತೆಗಳ ಕುರಿತೂ ಪ್ರವಾಸೋದ್ಯಮ ಇಲಾಖೆ ಅಧ್ಯಯನ ನಡೆಸುತ್ತಿದೆ. ಕ್ರೂಸ್ ಸಂಬಂಧಿತ ಈ ಎಲ್ಲ ಪ್ರಸ್ತಾವನೆಗಳು ಆರಂಭಿಕ ಹಂತದ ಅಧ್ಯಯನದಲ್ಲಿವೆ ಎಂದು ಹೇಳಿದರು.

ಸಂಪುಟ ಸಭೆಯಲ್ಲಿ ಚರ್ಚೆ:

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕ್ರಮಗಳ ಕುರಿತು ಚರ್ಚಿಸುತ್ತೇವೆ ಎಂದ ಜಾರ್ಜ್, ಈ ಪ್ರಸ್ತಾವನೆಯ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಈಗಾಗಲೇ ವಿವರವಾದ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು. ಈ ಭಾಗದ ಪ್ರವಾಸೋದ್ಯಮ ಸಂಬಂಧಿತ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ಸಿಗುವ ನಿರೀಕ್ಷೆಯಿದೆ ಎಂದರು.

ಬ್ಲೂ ಫ್ಲ್ಯಾಗ್ ಪ್ರಮಾಣೀಕರಣಕ್ಕಾಗಿ ರಾಜ್ಯ ಸರ್ಕಾರವು ಇನ್ನೂ ಹೆಚ್ಚಿನ ಕಡಲತೀರಗಳನ್ನು ಪ್ರಸ್ತಾಪಿಸಲಿದೆ ಎಂದರು.

ಕ್ಯಾಸಿನೊ ತೆರೆಯುವ ಚಿಂತನೆ ಇಲ್ಲ:

ಗೋವಾ ಮಾದರಿಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಕ್ಯಾಸಿನೊಗಳನ್ನು ಪ್ರಾರಂಭಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಜಾರ್ಜ್ ಸ್ಪಷ್ಟಪಡಿಸಿದರು. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಸ್ಥಳೀಯ ವ್ಯಾಪಾರ ಹಾಗೂ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವುದೇ ಪ್ರವಾಸೋದ್ಯಮ ಉತ್ತೇಜನದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನಿರ್ಬಂಧಗಳಿಂದಾಗಿ ರಸ್ತೆ ಅಭಿವೃದ್ಧಿಯಲ್ಲಿ ಎದುರಾಗುತ್ತಿರುವ ತೊಂದರೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ತಣ್ಣೀರುಬಾವಿ ಬೀಚ್‌ನಲ್ಲಿ ಮುಚ್ಚಲ್ಪಟ್ಟಿರುವ ಆಹಾರ ಮಳಿಗೆಗಳ ಆದಾಯ ಹಂಚಿಕೆ ವಿವಾದವನ್ನು ಪರಿಹರಿಸುವಂತೆ ಇದೇ ಸಂದರ್ಭ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳನ್ನೊಳಗೊಂಡು ಕೊಡು- ಕೊಳ್ಳುವ ಮನೋಭಾವದ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿ, ಮಳಿಗೆಗಳನ್ನು ಶೀಘ್ರದಲ್ಲೇ ಪುನಾರಂಭಿಸಬೇಕು ಎಂದು ನಿರ್ದೇಶಿಸಿದರು.

ಕರಾವಳಿ ಭಾಗದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ ಬೆಂಬಲವನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಪ್ರಮುಖರಾದ ಜೆ.ಆರ್. ಲೋಬೊ, ಇನಾಯತ್ ಅಲಿ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ವಿ. ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here