ರಾಜ್ಯ ಸಚಿವ ಸಂಪುಟ ಸಭೆ ನಡೆಯುವ ಡಿಸಿ ಕಚೇರಿ ಆವರಣ ಪರಿಶೀಲಿಸಿದ ಯು.ಟಿ. ಖಾದರ್

ಮಂಗಳೂರು: ಬೆಂಗಳೂರಿನ ಹೊರಗೆ ಪ್ರಥಮ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ಸೆ.18ರಂದು ನಡೆಯಲಿದ್ದು, ಇದರ ಸಿದ್ಧತೆಯ ಭಾಗವಾಗಿ ಭಾನುವಾರ ಬೆಳಗ್ಗೆ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ. ಖಾದರ್, ಸಂಪುಟ ಸಭೆಯು ಸರ್ಕಾರಿ ಸಂಸ್ಥೆಯಲ್ಲೇ ನಡೆಯಬೇಕೆಂಬುದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಇಚ್ಛೆಯಾಗಿದ್ದು, ಅದಕ್ಕಾಗಿ ಪಡೀಲ್ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸೂಕ್ತ ಸ್ಥಳ ಹಾಗೂ ಸಭಾಂಗಣ ಲಭ್ಯತೆಯ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದರು.

ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ, ಸಚಿವರು, ಮುಖ್ಯಮಂತ್ರಿಗಳ ಸಲಹೆಗಾರರು, ಹಣಕಾಸು ಕಾರ್ಯದರ್ಶಿ ಸೇರಿದಂತೆ ಪ್ರಮುಖ ಐದು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ವಿಷಯಾಧಾರಿತವಾಗಿ ಇತರ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ ಎಂದು ಯು.ಟಿ. ಖಾದರ್ ತಿಳಿಸಿದರು.

ಕರಾವಳಿ ಜಿಲ್ಲೆಯ ಅಭಿವೃದ್ಧಿಗೆ ರೂಪುರೇಷೆ:

ಸ್ಥಳೀಯ ಶಾಸಕರು ಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ, ಕರಾವಳಿ ಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಬೇಡಿಕೆಗಳು ಹಾಗೂ ಯೋಜನೆಗಳ ಪಟ್ಟಿಯನ್ನು ಸಂಪುಟ ಸಭೆಯ ಮುಂದೆ ತರಲಾಗುವುದು. ಹೊರ ಜಿಲ್ಲೆಗಳಿಂದ ಆಗಮಿಸುವ ಸಚಿವರು ಮತ್ತು ಅಧಿಕಾರಿಗಳಿಗೆ ಜಿಲ್ಲೆಯ ಬಗ್ಗೆ ಗೌರವ ಮೂಡುವಂತೆ ಅಗತ್ಯ ಆಡಳಿತಾತ್ಮಕ ಹಾಗೂ ವಾಸ್ತವ್ಯದ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು ಎಂದರು.

LEAVE A REPLY

Please enter your comment!
Please enter your name here