ದೇವಾಲಯಗಳಿಗಿಂತ ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡಿ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ – ಮಂಗಳೂರಿನಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆ

ಮಂಗಳೂರು: ದಾನ ಮಾಡುವುದಿದ್ದರೆ ದೇವಸ್ಥಾನಗಳಿಗಿಂತ ಹೆಚ್ಚಾಗಿ ಶಾಲೆ, ಕಾಲೇಜುಗಳಿಗೆ ದಾನ ನೀಡಿ. ನಮ್ಮ ಹೆಣ್ಣುಮಕ್ಕಳಿಗೆ ವಿದ್ಯೆಯ ಶಕ್ತಿ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕರೆ ನೀಡಿದ್ದಾರೆ.

ಅಖಿಲ ಭಾರತ ಬಿಲ್ಲವರ ಯೂನಿಯನ್ ಮತ್ತು ನಾರಾಯಣಗುರು ವಿದ್ಯಾಸಂಸ್ಥೆಗಳು ಕುದ್ರೋಳಿ ಜಂಟಿ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ಬ್ರಹ್ಮಶ್ರೀ ನಾರಾಯಣಗುರುಗಳ ೧೭೨ನೇ ಜನ್ಮ ಜಯಂತಿ ಆಚರಣೆ ಮತ್ತು ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯ ಹಾಗೂ ದೇಶದಲ್ಲಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಶೋಷಿತ ಸಮುದಾಯಗಳ ಸಮಗ್ರ ಸಬಲೀಕರಣ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯ. ಬೆವರು ಸುರಿಸಿ ದುಡಿಯುವ ಜನಸಾಮಾನ್ಯರ ತೆರಿಗೆ ಹಣದಿಂದಲೇ ಬೆಂಗಳೂರು ಮತ್ತು ದೆಹಲಿಯ ಖಜಾನೆಗಳು ತುಂಬುತ್ತಿವೆ. ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂದರು.

ನಾರಾಯಣ ಗುರು ಅಭಿವೃದ್ಧಿ ನಿಗಮದ ಮೂಲಕ ಹಿಂದುಳಿದ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ಒದಗಿಸಲು ಸರ್ಕಾರ ಬದ್ಧವಾಗಿರಬೇಕು ಎಂದು ಬಿ.ಕೆ. ಹರಿಪ್ರಸಾದ್ ಸರ್ಕಾರಕ್ಕೆ ಸಲಹೆ ನೀಡಿದರು.

ಮಕ್ಕಳಿಗೆ ಅವಕಾಶ ಒದಗಿಸಿ:

ಹಿಂದೆ ನಾವು ಉದ್ಯಮಿ ನವೀನ್‌ಚಂದ್ರ ಸುವರ್ಣ ಅವರ ವಿದ್ಯಾನಿಧಿಯ ಮೂಲಕ ₹ 3.50 ಲಕ್ಷ ಶುಲ್ಕ ಹಾಗೂ ₹ 50,000 ಬಟ್ಟೆ- ಖರ್ಚಿಗೆ ಸಹಾಯ ಕೊಡಿಸಿದ್ದೆವು. ಇಂದು ಅದೇ ಬಡ ಹುಡುಗಿ ಖರಗ್‌ಪುರ ಐಐಟಿಯಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಪ್ರತಿ ತಿಂಗಳಿಗೆ ₹ 3.50 ಲಕ್ಷ ಸಂಬಳ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಬಡತನ ಪ್ರತಿಭೆಗೆ ಅಡ್ಡಿಯಾಗಬಾರದು, ನಮ್ಮ ಮಕ್ಕಳಿಗೆ ಅವಕಾಶ ಕಲ್ಪಿಸಿದರೆ ಅಸಾಧ್ಯವಾದುದನ್ನು ಸಾಧಿಸುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.

ಆಡಳಿತಾತ್ಮಕ ಹುದ್ದೆ ಪಡೆಯಿರಿ:

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ಸದಾ ನಂಬರ್ ಒನ್. ಹೆಣ್ಣುಮಕ್ಕಳೇ ಮುಂಚೂಣಿಯಲ್ಲಿರುತ್ತಾರೆ. ಆದರೆ ನಂತರ ಹುಡುಕಿದರೆ ನಮ್ಮ ಸಮುದಾಯಗಳಿಂದ ಒಬ್ಬ ಐಎಎಸ್ ಇಲ್ಲ, ಕೆಎಎಸ್ ಇಲ್ಲ. ಕೇವಲ ಪುಸ್ತಕದ ಬದನೆಕಾಯಿಯಾದರೆ ಸಾಲದು; ಆಡಳಿತಾತ್ಮಕ ಹುದ್ದೆಗಳನ್ನು ಹಿಡಿದು ಸಮಾಜವನ್ನು ಮುನ್ನಡೆಸಬೇಕು ಎಂದು ಬಿಕೆ ಕರೆ ನೀಡಿದರು.

ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ಶೈಕ್ಷಣಿಕ ಜಾಗೃತಿ ಕಾರ್ಯವಾಗಬೇಕು. ನಾರಾಯಣ ಗುರುಗಳು ಯಾವುದೇ ಸಂಘರ್ಷವಿಲ್ಲದೆ ಹೋರಾಟ ಮಾಡಿದವರು. ಸಮಾಜದ ಸುಧಾರಣೆ, ಸಾಮರಸ್ಯದ ಪರಿವರ್ತನೆ ಆಗಬೇಕಿದೆ. ಹಿಂದುಳಿದ ವರ್ಗಗಳು ಸಂಘಟಿತರಾಗಿ ಸಮಾಜದಲ್ಲಿ ನೇತೃತ್ವ ವಹಿಸಬೇಕು ಎಂದರು.

ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಐವನ್ ಡಿಸೋಜ, ಯೂನಿಯನ್‌ನ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ಉಭಯ ಜಿಲ್ಲೆಯ ವಿವಿಧ ತಾಲೂಕು ಅಧ್ಯಕ್ಷರಾದ ಜಯವಿಕ್ರಮ್ ಕಲ್ಲಾಪು, ಸತೀಶ್ ಕುಮಾರ್ ಕೆಡಿಂಜೆ, ಶಶಿಧರ ಎಂ. ಅಮೀನ್ ಉಡುಪಿ, ಅಶೋಕ್ ಪೂಜಾರಿ ಬೀಜಾಡಿ ಮತ್ತು ಪ್ರಮಲ್ ಕುಮಾರ್ ಇದ್ದರು.

LEAVE A REPLY

Please enter your comment!
Please enter your name here