




ಮಂಗಳೂರು: ಎಷ್ಟೇ ಉನ್ನತ ಶಿಕ್ಷಣ ಪಡೆದರೂ ನಮ್ಮ ಊರು, ನಮ್ಮ ಸಂಸ್ಕೃತಿ, ಆಚಾರ– ವಿಚಾರಗಳನ್ನು ಎಂದಿಗೂ ಮರೆಯಬಾರದು. ಜೀವನದಲ್ಲಿ ಒಂದು ಕನಸನ್ನು ಇಟ್ಟುಕೊಳ್ಳಿ. ಆ ಕನಸನ್ನು ನನಸಾಗಿಸಲು ನಿರಂತರವಾಗಿ ಪರಿಶ್ರಮಿಸಿ. ನಿಮ್ಮ ಕನಸನ್ನು ನನಸಾಗಿಸುವ ಜತೆಗೆ, ಇನ್ನೊಬ್ಬರ ಕನಸನ್ನು ನನಸಾಗಿಸಲು ಕೂಡ ಶ್ರಮಿಸಿ ಎಂದು ಶೆಫ್ ಟಾಲ್ಕ್ ಫುಡ್ & ಹಾಸ್ಪಿಟಾಲಿಟಿ ಸ್ಥಾಪಕ ಹಾಗೂ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.


ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ನಡೆದ ಶ್ರದ್ಧಾ- ಸ್ನಾತಕೋತ್ತರ ವಿದ್ಯಾರ್ಥಿಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.


ಮುಖ್ಯ ಅತಿಥಿ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿ, ಸಮಾಜ ಸೇವೆಯನ್ನು ಮಾನವ ಸೇವೆಯೆಂದು ಪರಿಗಣಿಸಬೇಕು. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಭಾರತವು ಕೇವಲ ಒಂದು ದೇಶವಲ್ಲ; ಭಾರತದ ಪ್ರಗತಿ ಎಂದರೆ ಇಡೀ ಮಾನವ ಸಮಾಜದ ಪ್ರಗತಿ ಎಂದರ್ಥ. ಒಬ್ಬರ ಏಳಿಗೆಯೊಂದಿಗೆ ಎಲ್ಲರನ್ನೂ ಜತೆಯಾಗಿ ಕೊಂಡೊಯ್ಯುವುದೇ ನೀಜವಾದ ಪ್ರಗತಿ ಎಂದು ಕರೆ ನೀಡಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಎ. ಶ್ರೀನಿವಾಸ ರಾವ್ ಭಾಗವಹಿಸಿದ್ದರು. ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು. ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಯುಕ್ತೇಶಾನಂದಜಿ ಮೊದಲ ಅವಧಿ ನಡೆಸಿಕೊಟ್ಟರು. ಎರಡನೇ ಅವಧಿಯಲ್ಲಿ ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಎನ್. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಂತರ “ವೇತನದಾಚೆಗೆ: ಉದ್ಯೋಗವನ್ನು ಅರ್ಥಪೂರ್ಣವಾಗಿಸುವುದು ಯಾವುದು?” ಎಂಬ ವಿಷಯದ ಕುರಿತಾಗಿ ನಡೆದ ಸಂವಾದದಲ್ಲಿ ಮಂಗಳೂರಿನ ಮನಶಾಂತಿ ಸಂಸ್ಥೆಯ ನಿರ್ದೇಶಕಿ ಡಾ. ರಮೀಲಾ ಶೇಖರ್, ಮಂಗಳೂರಿನ ಎಐ ಲಾಜಿಕ್ಸ್ ಸ್ಥಾಪಕ ಹಾಗೂ ತಾಂತ್ರಿಕ ನಿರ್ದೇಶಕ ಪ್ರವೀಣ್ ಉಡುಪ, ಮಂಗಳೂರಿನ ಇನ್ವೆಂಜರ್ ಟೆಕ್ನಾಲಜೀಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಕೃತಿಕಾ ಸರಳಾಯ ಭಾಗವಹಿಸಿದ್ದರು. ನಿವೃತ್ತ ಯೋಧ ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಮಂಗಳೂರು ವಿವಿ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗಡೆ ವಂದಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.
ಎರಡನೇ ದಿನದ ವಿಚಾರ ಸಂಕಿರಣ ಮೇಧಾ – ೨೦೨೬ ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ ಸೆ.10ರಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.








