


ಮಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ೪x೪೦೦ ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಕ್ಸ್ಡ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಅಥ್ಲೀಟ್ ಎಂ.ಆರ್. ಪೂವಮ್ಮ ಅವರ ಮಂಗಳೂರಿನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.





ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂವಮ್ಮ ಅವರ ಈ ಯಶಸ್ಸು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ಣು ತೆರೆಸುವಂತೆ ಮಾಡಿದೆ. ಇತರ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಕ್ರೀಡಾಪಟುಗಳಿಗೆ ನೀಡಬೇಕಾದ ಪ್ರೋತ್ಸಾಹ ಮತ್ತು ಸೌಲಭ್ಯಗಳ ಕುರಿತು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


6ರಂದು ರಾಜ್ಯಮಟ್ಟದ ಸನ್ಮಾನ:
ಈಗಾಗಲೇ ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣ ಹಾಗೂ ದೂರವಾಣಿ ಕರೆ ಮೂಲಕ ಪೂವಮ್ಮ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅ.6ರಂದು ಸಂಜೆ ಬೆಂಗಳೂರಿನಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ರಾಜ್ಯದ ಎಲ್ಲ ಕ್ರೀಡಾಪಟುಗಳಿಗೆ ಸರ್ಕಾರದಿಂದ ಗೌರವ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ಮುಖ್ಯಮಂತ್ರಿ ಅವರು ಕ್ರೀಡಾಪಟುಗಳಿಗಾಗಿ ವಿಶೇಷ ಘೋಷಣೆಗಳನ್ನು ಮಾಡಲಿದ್ದಾರೆ ಎಂದರು.
ಎಂ.ಆರ್. ಪೂವಮ್ಮ ಅವರು ಇಡೀ ದೇಶಕ್ಕೆ ಗೌರವ ತಂದಿದ್ದಾರೆ. ಕೊಡಗಿನವರಾದ ಅವರು ಮಂಗಳೂರಿನಲ್ಲಿ ಬೆಳೆದು, ಇಲ್ಲೇ ತರಬೇತಿ ಪಡೆದು ಈ ಸಾಧನೆ ಮಾಡಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತಷ್ಟು ಸಂತೋಷ ಹಾಗೂ ಗೌರವ ತಂದಿದೆ ಎಂದು ಯು.ಟಿ. ಖಾದರ್ ಹೇಳಿದರು.








