ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭೇಟಿಯಾದ ಸಚಿವ ಯು.ಟಿ. ಖಾದರ್ – ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಯಾತ್ರಾರ್ಥಿಗಳ ಸೇವೆಗಳಿಗೆ ಸಂಬಂಧಿಸಿ ಮನವಿ ಸಲ್ಲಿಕೆ

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ನವದೆಹಲಿಯಲ್ಲಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿ, ಕರ್ನಾಟಕದ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಯಾತ್ರಾರ್ಥಿಗಳ ಸೇವೆಗಳಿಗೆ ಸಂಬಂಧಿಸಿದಂತೆ ಗಂಭೀರ ಸಮಾಲೋಚನೆ ನಡೆಸಿ ಮನವಿ ಸಲ್ಲಿಸಿದರು.

ರಾಜ್ಯ ಹಜ್ ಸಮಿತಿ ಮೂಲಕ ಉಮ್ರಾ ಯಾತ್ರೆ:

ಪ್ರತಿ ವರ್ಷ ಕರ್ನಾಟಕದಿಂದ 10,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ತೆರಳಿ ಅನುಭವಿಸುತ್ತಿರುವ ವಂಚನೆ ಹಾಗೂ ದುಬಾರಿ ವೆಚ್ಚವನ್ನು ತಪ್ಪಿಸಲು, ಕರ್ನಾಟಕ ರಾಜ್ಯ ಹಜ್ ಸಮಿತಿ ಮೂಲಕ “ಲಾಭವೂ ಇಲ್ಲ, ನಷ್ಟವೂ ಇಲ್ಲ” ಆಧಾರದಲ್ಲಿ ಉಮ್ರಾ ಯಾತ್ರೆ ಆಯೋಜಿಸಲು ಅನುಮೋದನೆ ಕೋರಲಾಯಿತು.

ಪಿಎಂಜೆವಿಕೆ ಅಡಿ ಬಾಕಿ ಇರುವ 25 ಯೋಜನೆಗಳಿಗೆ ಅನುಮೋದನೆ:

ಪ್ರಧಾನ ಮಂತ್ರಿ ಜನ ವಿಕಾಸ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಬಾಕಿ ಇರುವ ₹ 294.53 ಕೋಟಿ ಮೊತ್ತದ 25 ಯೋಜನೆಗಳಿಗೆ (1 ಆಸ್ಪತ್ರೆ – ₹45.50 ಕೋಟಿ, 4 ಕೌಶಲ್ಯ ಕೇಂದ್ರಗಳು – ₹72.00 ಕೋಟಿ, 5 ವಸತಿ ಶಾಲೆಗಳು – ₹95.00 ಕೋಟಿ, 11 ವಿದ್ಯಾರ್ಥಿ ನಿಲಯಗಳು – ₹67.40 ಕೋಟಿ, 4 ದಿನದ ಶಾಲೆಗಳು – ₹14.63 ಕೋಟಿ) ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಪಿಎಂ ವಿಕಾಸ್ ಪೋರ್ಟಲ್ ಲಾಗಿನ್ ಪ್ರವೇಶ:

ಪಿಎಂ ವಿಕಾಸ್ ಯೋಜನೆಯಡಿ ಕರ್ನಾಟಕದ 5,790 ಫಲಾನುಭವಿಗಳಿಗೆ ಅನುಕೂಲವಾಗುವಂತೆ, ರಾಜ್ಯ ಚಾನಲೈಸಿಂಗ್ ಏಜೆನ್ಸಿಯಾದ ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಪೋರ್ಟಲ್ ಲಾಗಿನ್ ವಿವರಗಳನ್ನು ಶೀಘ್ರವಾಗಿ ನೀಡುವಂತೆ ಕೋರಲಾಯಿತು.

ಅಂತರಧರ್ಮೀಯ ಸಮ್ಮೇಳನ:

ದೇಶಾದ್ಯಂತದ ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಸಮ್ಮೇಳನ ಆಯೋಜಿಸುವ ಕುರಿತು ಸಚಿವರೊಂದಿಗೆ ಯು.ಟಿ. ಖಾದರ್ ಸಮಾಲೋಚಿಸಿದರು. ಇದರೊಂದಿಗೆ, ಧಾರ್ಮಿಕ ಸೌಹಾರ್ದತೆ, ಪರಸ್ಪರ ತಿಳುವಳಿಕೆ ಹಾಗೂ ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸಲು ದೇಶದ ಎಲ್ಲ ರಾಜ್ಯಗಳಲ್ಲಿ ‘ಅಂತರ ಧರ್ಮೀಯ ಸಮ್ಮೇಳನಗಳನ್ನು’ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.

ಈ ಎಲ್ಲಾ ಮನವಿಗಳು ಮತ್ತು ಪ್ರಸ್ತಾವನೆಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಮ್ರಾ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಹಜ್ ಸಮಸ್ಯೆಗಳ ಬಗ್ಗೆ ಶೀಘ್ರವೇ ಪ್ರತ್ಯೇಕ ಸಭೆ ಕರೆಯುವುದಾಗಿ ಹಾಗೂ ಪಿಎಂ ಜೆವಿಕೆ ಯೋಜನೆಗಳ ಕುರಿತು ಪ್ರಧಾನಮಂತ್ರಿ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here